ಓಮಿಕ್ರಾನ್ ಆತಂಕ: ಬ್ರಿಟನ್, ನೆದರ್ಲ್ಯಾಂಡ್'ನಿಂದ ಬಂದ 4 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆ, ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಮಾದರಿ ರವಾನೆ!
ಬ್ರಿಟನ್ ಹಾಗೂ ನೆದರ್ಲ್ಯಾಂಡ್ ನಿಂದ ದೆಹಲಿಗೆ ಆಗಮಿಸಿದ ನಾಲ್ವರ ಪ್ರಯಾಣಿಕರಲ್ಲಿ ಬುಧವಾರ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದೀಗ ಅವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Published: 01st December 2021 01:14 PM | Last Updated: 01st December 2021 01:33 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಬ್ರಿಟನ್ ಹಾಗೂ ನೆದರ್ಲ್ಯಾಂಡ್ ನಿಂದ ದೆಹಲಿಗೆ ಆಗಮಿಸಿದ ನಾಲ್ವರ ಪ್ರಯಾಣಿಕರಲ್ಲಿ ಬುಧವಾರ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದೀಗ ಅವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸೋಂಕು ಪೀಡಿತ ನಾಲ್ವರು ಪ್ರಯಾಣಿಕರನ್ನೂ ಇದೀಗ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶದಿಂದ ಬರುವ ಸೋಂಕಿತರನ್ನು ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು, ಆಸ್ಪತ್ರೆಯಲ್ಲಿ ಇಂತಹ ಸೋಂಕಿತರನ್ನು ಪ್ರತ್ಯೇಕವಾಗಿಟ್ಟು, ಚಿಕಿತ್ಸೆಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರತದ ಬಹುತೇಕ ಮಂದಿ ಓಮಿಕ್ರಾನ್ ಸೋಂಕಿನ ವಿರುದ್ಧ ಸುರಕ್ಷಿತ: ಖ್ಯಾತ ವೈರಾಲಜಿಸ್ಟ್ ಶಾಹಿದ್ ಜಮೀಲ್
"ಆಮ್ಸ್ಟರ್ಡ್ಯಾಮ್ ಮತ್ತು ಲಂಡನ್ನಿಂದ ನಾಲ್ಕು ವಿಮಾನಗಳು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿದ್ದು, ಮಂಗಳವಾರ 12ರಿಂದ ಬೆಳಿಗ್ಗೆ 6 ಗಂಟೆಯವರೆಗೆ 1,013 ಪ್ರಯಾಣಿಕರು ಆಗಮಿಸಿದ್ದಾರೆ. ಇಂದು ಬೆಳಿಗ್ಗೆ ವಿದೇಶಗಳಿಂದ ರಾಷ್ಟ್ರಕ್ಕೆ ಆಗಮಿಸಿದ 1,013 ಮಂದಿಯ ಪೈಕಿ ನಾಲ್ವರಲ್ಲಿ ಇದೀಗ ಸೋಂಕು ಪತ್ತೆಯಾಗಿದ್ದು, ಈ ಬೆಳವಣಿಗೆಯು ಓಮಿಕ್ರಾನ್ ರೂಪಾಂತರಿ ತಳಿ ಕುರಿತ ಆತಂಕವನ್ನು ಹೆಚ್ಚು ಮಾಡಿದೆ.
ವಿದೇಶದಿಂದ ರಾಷ್ಟ್ರಕ್ಕೆ ಆಗಮಿಸಿದ ಈ ನಾಲ್ವರೂ ಪ್ರಯಾಣಿಕರೂ ಭಾರತೀಯರೇ ಆಗಿದ್ದಾರೆಂದು ತಿಳಿದುಬಂದಿದೆ.
ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳನ್ನು ಕೇಂದ್ರ ಸರ್ಕಾರ "ಅಪಾಯದಲ್ಲಿರುವ" ರಾಷ್ಟ್ರ ಎಂದು ಪಟ್ಟಿ ಮಾಡಿದೆ.
ಇದನ್ನೂ ಓದಿ: ಓಮಿಕ್ರಾನ್ ಎದುರಿಸಲು ದೆಹಲಿ ಸನ್ನದ್ಧ, 30,000 ಆಮ್ಲಜನಕ ಹಾಸಿಗೆಗಳು, 10,000 ಐಸಿಯು ಸಿದ್ಧ: ಕೇಜ್ರಿವಾಲ್
ಇದರಂತೆ ಹೆಚ್ಚು ಅಪಾಯವಿರುವ ರಾಷ್ಟ್ರಗಳಿಂದ ಬರುವವರಿಗೆ ಈಗಾಗಲೇ ಕೇಂದ್ರ ಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿನ್ನು ಬಿಡುಗಡೆ ಮಾಡಿದ್ದು, ಈ ಮಾರ್ಗಸೂಚಿಯು ಇಂದಿನಿಂದ ಜಾರಿಗೆ ಬಂದಿದೆ.
ಈ ಅಪಾಯಕಾರಿ ರಾಷ್ಟ್ರಗಳಿಂದ ಬರುವ ಪ್ರಯಾಣಿಕರು 14 ದಿನಗಳ ಪ್ರವಾಸ ಇತಿಹಾಸದ ಪೂರ್ಣ ಮಾಹಿತಿಯನ್ನು ನೀಡಬೇಕು. 72 ಗಂಟೆಗಳ ಮೊದಲ ಕೋವಿಡ್ ನೆಗೆಟಿವ್ ವರದಿಯನ್ನೂ ಸಲ್ಲಿಸಬೇಕಿದೆ. ಮಾಹಿತಿ ಖಚಿತ ಎಂದು ಪ್ರಯಾಣಿಕರು ಸ್ವಯಂ ದೃಢೀಕರಿಸಬೇಕಿದೆ. ಭಾರತಕ್ಕೆ ಆಗಮಿಸುವುದಕ್ಕೂ ಮುನ್ನ ಹಾಗೂ ಬಂದ ಬಳಿಕ ಪರೀಕ್ಷೆಗೆ ಒಳಗಾಗಬೇಕು. ಪರೀಕ್ಷೆ ವರದಿ ಬರುವವರೆಗೂ ವಿಮಾನ ನಿಲ್ದಾಣದಿಂದ ತೆರಳುವಂತಿಲ್ಲ. ನೆಗೆಟಿವ್ ಬಂದರೂ 7 ದಿನ ಹೋಮ್ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ.