ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಜವಾದ್ ಚಂಡಮಾರುತ ಸೃಷ್ಟಿ; ಒಡಿಶಾ, ಆಂಧ್ರಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾದ ಪರಿಣಾಮ ಸೃಷ್ಟಿಯಾಗಿರುವ ಜವಾದ್ ಚಂಡಮಾರುತ ಶನಿವಾರ ಒಡಿಶಾ ಮತ್ತು ಆಂಧ್ರ ಪ್ರದೇಶ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾದ ಪರಿಣಾಮ ಸೃಷ್ಟಿಯಾಗಿರುವ ಜವಾದ್ ಚಂಡಮಾರುತ ಶನಿವಾರ ಒಡಿಶಾ ಮತ್ತು ಆಂಧ್ರ ಪ್ರದೇಶ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಹವಾಮಾನ ಇಲಾಖೆ, ವಾಯುಭಾರ ಕುಸಿತದಿಂದಾಗಿ ಜವಾದ್ ಚಂಡಮಾರುತ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದ್ದು, ಚಂಡಮಾರುತದ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ಮಳೆ ತೀವ್ರಗೊಳ್ಳಲಿದೆ. ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಇಂದು ಸಂಜೆ ವೇಳೆಗೆ ಬಂಗಾಳಕೊಲ್ಲಿಯಲ್ಲಿ ಜವಾದ್ ಚಂಡಮಾರುತವು ರೂಪುಗೊಳ್ಳಲಿದ್ದು, ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಚಂಡಮಾರುತದಿಂದ ಭಾರೀ ಮಳೆಯಾಗಲಿದೆ. ಶನಿವಾರ ಬೆಳಿಗ್ಗೆ ಆಂಧ್ರ ಪ್ರದೇಶದ ಉತ್ತರ ಭಾಗ ಮತ್ತು ಒಡಿಶಾದ ದಕ್ಷಿಣ ಕರಾವಳಿಯ ಸಮೀಪವಿರುವ ಪ್ರದೇಶವನ್ನು ತಲುಪುವ ನಿರೀಕ್ಷೆಯಿದೆ. ಈ ಎರಡೂ ರಾಜ್ಯಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಗಂಟೆಗೆ 50 ರಿಂದ 60 ಕಿಮೀ ವೇಗದಲ್ಲಿ 70 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರದಲ್ಲೂ ಮಳೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

ನಾಳೆ ಒಡಿಶಾ, ಅಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ 'ಜವಾದ್'
ಹವಾಮಾನ ಇಲಾಖೆ ಮೂಲಗಳ ಪ್ರಕಾರ ಜವಾದ್ ಚಂಡಮಾರುತವು ಡಿಸೆಂಬರ್ 4ರ ಬೆಳಿಗ್ಗೆ ಉತ್ತರ ಆಂಧ್ರಪ್ರದೇಶ-ಒಡಿಶಾದ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದ್ದು, ಈ ವೇಳೆ ಗಾಳಿಯ ವೇಗ ಗಂಟೆಗೆ 100 ಕಿಲೋಮೀಟರ್​ವರೆಗೆ ಇರುತ್ತದೆ ಎನ್ನಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಒಡಿಶಾ ಮತ್ತು ಆಂಧ್ರ ಪ್ರದೇಶ ಕರಾವಳಿ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಒಡಿಶಾದ 4 ಜಿಲ್ಲೆಗಳಿಗೆ ರೆಡ್ ಅಲರ್ಟ್, 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

ಎನ್ ಡಿಆರ್ ಎಫ್ ತಂಡಗಳ ನಿಯೋಜನೆ
ಇನ್ನು ಜವಾದ್ ಚಂಡಮಾರುತದ ಅಬ್ಬರ ಒಡಿಶಾದಲ್ಲೇ ಹೆಚ್ಚಾಗಿರಲಿದ್ದು, ಚಂಡಮಾರುತದ ಹಿನ್ನಲೆಯಲ್ಲಿ ಒಡಿಶಾದಲ್ಲಿ ಡಿಸೆಂಬರ್ 5 ರವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ 64 ತಂಡಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದ್ದು, ಇದಲ್ಲದೆ ರಾಜ್ಯ ಅಗ್ನಿಶಾಮಕ ಸೇವೆಗಳು ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ 266 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಈಗಾಗಲೇ 95 ರೈಲುಗಳನ್ನು ರದ್ದುಗೊಳಿಸಲಾಗಿದೆ.

ಆಂಧ್ರ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ
ಇನ್ನು ನೆರೆಯ ಆಂಧ್ರ ಪ್ರದೇಶದ ಮೇಲೂ ಚಂಡಮಾರುತ ಪ್ರಭಾವವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ತೀರ ಪ್ರದೇಶದ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗುತ್ತಿದ್ದು, ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ವಿಶಾಖಪಟ್ಟಣಂ ಮತ್ತು ಶ್ರೀಕಾಕುಳಂ ಜಿಲ್ಲೆಗಳಾದ್ಯಂತ ಎಲ್ಲಾ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಲಾಗಿದೆ. ವಿಶಾಖಪಟ್ಟಣಂ ಜಿಲ್ಲೆಯಿಂದ ಇಂದು ಮತ್ತು ನಾಳೆ ಸುಮಾರು 65 ರೈಲುಗಳನ್ನು ರದ್ದುಗೊಳಿಸಲಾಗಿದೆ.

ಸೌದಿ ಅರೇಬಿಯಾದಿಂದ 'ಜವಾದ್' ಹೆಸರು
ಇನ್ನು ಹಾಲಿ ಚಂಡಮಾರುತಕ್ಕೆ ಸೌದಿ ಅರೇಬಿಯಾ ಜವಾದ್ ಎಂದು ಹೆಸರು ನೀಡಿದೆ. ವಿಶ್ವ ಹವಾಮಾನ ಸಂಸ್ಥೆಯ ಅಡಿಯಲ್ಲಿ ಬರುವ 11 ಹವಾಮಾನ ಮುನ್ನೆಚ್ಚರಿಕಾ ಕೇಂದ್ರಗಳಿಗೆ ಹೆಸರನ್ನು ಸೂಚಿಸುವ ಅವಕಾಶವಿರುತ್ತದೆ. ಅವೆಲ್ಲವನ್ನೂ ಜಾಗತಿಕ ಹವಾಮಾನ ಸಂಘಟನೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿ (ಆಗ್ನೇಯ ಪೆಸಿಫಿಕ್‌)ಯ ಅಂತಿಮ ಒಪ್ಪಿಗೆಗೆ ಸಲ್ಲಿಸಬೇಕಾಗುತ್ತದೆ. ಈ ಸಮಿತಿಗೆ ಶಿಫಾರಸನ್ನು ಒಪ್ಪುವ, ತಿರಸ್ಕರಿಸುವ, ಬೇರೆಯದೇ ಹೆಸರು ಸೂಚಿಸುವ ಅಧಿಕಾರ ಹೊಂದಿದೆ. ಹೆಸರು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಆಯಾ ಭಾಗದ ಹಲವಾರು ರಾಷ್ಟ್ರಗಳು ಒಳಗೊಳ್ಳುತ್ತವೆ.

ಅಂತಿಮವಾಗಿ ಜನಮತಗಣನೆಯ ಆಧಾರದಲ್ಲಿ ಹೆಸರು ಅಂತಿಮಗೊಳಿಸಲಾಗುತ್ತದೆ. ಒಮ್ಮೆ ಚಂಡಮಾರುತಕ್ಕೆ ಬಳಸಿದ ಹೆಸರನ್ನು 10 ವರ್ಷಗಳವರೆಗೆ ಬಳಸುವಂತಿಲ್ಲ. ಇದು ವಿಮೆ ಹಿಂಪಡೆಯುವಿಕೆಗಾಗಿ ಸುಲಭವಾಗುವ ವ್ಯವಸ್ಥೆಯಾಗಿದೆ. ಹಾಲಿ ಸರದಿ ಸೌದಿ ಅರೇಬಿಯಾ ಹವಾಮಾನ ಇಲಾಖೆಯದ್ದಾಗಿದ್ದು, ಜವಾದ್ ಎಂಬ ಹೆಸರನ್ನು ಅದು ಸೂಚಿಸಿದ್ದು, ಅದನ್ನು ಆಗ್ನೇಯ ಪೆಸಿಫಿಕ್‌ ಹವಾಮಾನ ಸಂಸ್ಥೆ ಅನುಮೋದಿಸಿದೆ.

ಪ್ರಧಾನಿ ಮೋದಿ ಪರಿಶೀಲನೆ
ಇನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಚಂಡಮಾರುತ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧತೆಯನ್ನು ಪರಿಶೀಲಿಸಿದರು. ಈ ಕುರಿತು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದ್ದು, 'ಜನರನ್ನು ಸುರಕ್ಷಿತವಾಗಿ ಸುರಕ್ಷತೆಗೆ ಸ್ಥಳಾಂತರಿಸಲು ಮತ್ತು ವಿದ್ಯುತ್, ದೂರಸಂಪರ್ಕ, ಆರೋಗ್ಯ, ಕುಡಿಯುವ ನೀರಿನಂತಹ ಎಲ್ಲಾ ಅಗತ್ಯ ಸೇವೆಗಳ ನಿರ್ವಹಣೆ ಮತ್ತು ಅವುಗಳನ್ನು ತಕ್ಷಣವೇ ಪುನಃಸ್ಥಾಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಾವುದೇ ಅಡಚಣೆಯ ಘಟನೆ, ಅಗತ್ಯ ಔಷಧಗಳು ಮತ್ತು ಸರಬರಾಜುಗಳ ಸಾಕಷ್ಟು ಸಂಗ್ರಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಡೆತಡೆಯಿಲ್ಲದ ಚಲನೆಗೆ ಯೋಜಿಸಲು ಅವರು ಅಧಿಕಾರಿಗಳ ಕೇಳಿದ್ದಾರೆ. ಕಂಟ್ರೋಲ್ ರೂಂಗಳ ದುಂಡು-ಗಡಿಯಾರದ ಕಾರ್ಯನಿರ್ವಹಣೆಗೂ ಅವರು ನಿರ್ದೇಶನ ನೀಡಿದರು ಎನ್ನಲಾಗಿದೆ. 

ಬಂಗಾಳ, ಜಾರ್ಖಂಡ್ ನಲ್ಲೂ ಮಳೆ
ಜವಾದ್ ಚಂಡಮಾರುತ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಇಂದಿನಿಂದ ಡಿ. 6ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಎನ್‌ಡಿಆರ್‌ಎಫ್ ರಾಜ್ಯದಲ್ಲಿ ಎಂಟು ತಂಡಗಳನ್ನು ನಿಯೋಜಿಸಿದೆ.  ಇನ್ನು ಜಾರ್ಖಂಡ್‌ನಲ್ಲಿ ಜವಾದ್ ಚಂಡಮಾರುತವು ಸಾಧಾರಣ ಪರಿಣಾಮ ಬೀರುವ ಸಾಧ್ಯತೆಯಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಜಾರ್ಖಂಡ್‌ಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮಳೆ ತೀವ್ರಗೊಳ್ಳಲಿದ್ದು, ಹೆಚ್ಚೇನೂ ಅಪಾಯವಿಲ್ಲ ಎನ್ನಲಾಗಿದೆ. ಚಂಡಮಾರುತದಿಂದ ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com