ಉತ್ತರ ಪ್ರದೇಶ: ಕೋವಿಡ್ ನಿಂದ ಖಿನ್ನತೆಗೆ ಒಳಗಾದ ವೈದ್ಯನಿಂದ ಪತ್ನಿ, ಇಬ್ಬರು ಮಕ್ಕಳ ಹತ್ಯೆ

ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಒಳಗಾಗಿದ್ದ 61 ವರ್ಷದ ವೈದ್ಯರೊಬ್ಬರು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ದಾರುಣ ಘಟನೆ ಕಾನ್ಪುರದ ಕಲ್ಯಾಣಪುರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾನ್ಪುರ: ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಒಳಗಾಗಿದ್ದ 61 ವರ್ಷದ ವೈದ್ಯರೊಬ್ಬರು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ದಾರುಣ ಘಟನೆ ಕಾನ್ಪುರದ ಕಲ್ಯಾಣಪುರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಖಾಸಗಿ ವೈದ್ಯಕೀಯ ಕಾಲೇಜಿನ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸುಶೀಲ್ ಕುಮಾರ್ ಅವರು ತಾವು ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದು, "ಕೋವಿಡ್-19 ಯಾರನ್ನೂ ಉಳಿಸುವುದಿಲ್ಲ" ಎಂದು ಉಲ್ಲೇಖಿಸಿ ಪತ್ರ ಬರೆದಿದ್ದಾರೆ. ಅಲ್ಲದೆ "ತಮ್ಮ ಪತ್ನಿ ಮಕ್ಕಳನ್ನು ಕೋವಿಡ್ ನಿಂದ ಮುಕ್ತಗೊಳಿಸಲು ಮತ್ತು ಅವರ ಎಲ್ಲಾ ಸಮಸ್ಯೆಗಳನ್ನು ಒಂದು ಕ್ಷಣದಲ್ಲಿ ಪರಿಹರಿಸಲು" ಕೊಲೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಶುಕ್ರವಾರ ಸಂಜೆ, ಸುಶೀಲ್ ಕುಮಾರ್ ಅವರು ತನ್ನ ಅವಳಿ ಸಹೋದರ ಸುನೀಲ್‌ಗೆ ಸಂದೇಶ ಕಳುಹಿಸಿದ್ದು, ಹತ್ಯೆಯ ಬಗ್ಗೆ ಪೊಲೀಸರಿಗೆ ತಿಳಿಸುವಂತೆ ಕೇಳಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸುನಿಲ್ ಅವರು ಅಪಾರ್ಟ್‌ಮೆಂಟ್‌ಗೆ ಧಾವಿಸಿ ಬಂದಾಗ ಹೊರಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ಭದ್ರತಾ ಸಿಬ್ಬಂದಿಯ ಸಹಾಯದಿಂದ ಅಪಾರ್ಟ್‌ಮೆಂಟ್‌ನ ಬೀಗ ಒಡೆದು ಒಳ ಪ್ರವೇಶಿಸಿದ ಅವರು, ಚಂದ್ರಪ್ರಭಾ(48), ಇಂಜಿನಿಯರಿಂಗ್‌ ವಿದ್ಯಾರ್ಥಿ ಶಿಖರ್‌ ಸಿಂಗ್‌(18), ಹೈಸ್ಕೂಲ್‌ ವಿದ್ಯಾರ್ಥಿನಿ ಖುಷಿ ಸಿಂಗ್‌ ಅವರ ಮೃತದೇಹಗಳು ಪ್ರತ್ಯೇಕ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದವು. ತಕ್ಷಣ ಹತ್ಯೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಅವರು, ಸುಶೀಲ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.

ಚಂದ್ರಪ್ರಭಾ ಅವರನ್ನು ಸುತ್ತಿಗೆಯಿಂದ ಕೊಂದರೆ, ಶಿಖರ್ ಮತ್ತು ಖುಷಿಯನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು  ಪೊಲೀಸ್ ಕಮಿಷನರ್ ಅಸಿಮ್ ಅರುಣ್ ಅವರು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಮೂವರನ್ನು ಹತ್ಯೆಗೈದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪತ್ನಿ ಮತ್ತು ಮಕ್ಕಳಿಗೆ ಅಮಲು ಮಿಶ್ರಿತ ಚಹಾವನ್ನು ನೀಡಿ ಪ್ರಜ್ಞೆ ತಪ್ಪಿದ ನಂತರ ಕೊಲ್ಲಲಾಗಿದೆ ಎಂದು ತೋರುತ್ತಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com