Sansad TV: ಸಂಸದ್ ಟಿವಿ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ: ಪತ್ರದಲ್ಲಿ ನೀಡಿದ ಕಾರಣ ಏನು?

ತಮ್ಮನ್ನು ಸೇರಿಸಿ 12 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿದ ಕ್ರಮವನ್ನು ವಿರೋಧಿಸಿ ಶಿವಸೇನೆಯ ಸಂಸದೆ ಪ್ರಿಯಾಂಕ ಚತುರ್ವೇದಿ ಸಂಸದ ಟಿವಿಯ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರದ ಸಂಸದೆ ಪ್ರಿಯಾಂಕ ಚತುರ್ವೇದಿ ಅಮಾನತುಗೊಂಡ 12 ಮಂದಿ ರಾಜ್ಯಸಭಾ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಪ್ರಿಯಾಂಕ ಚತುರ್ವೇದಿ
ಪ್ರಿಯಾಂಕ ಚತುರ್ವೇದಿ

ನವದೆಹಲಿ: ತಮ್ಮನ್ನು ಸೇರಿಸಿ 12 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿದ ಕ್ರಮವನ್ನು ವಿರೋಧಿಸಿ ಶಿವಸೇನೆಯ ಸಂಸದೆ ಪ್ರಿಯಾಂಕ ಚತುರ್ವೇದಿ ಸಂಸದ ಟಿವಿಯ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರದ ಸಂಸದೆ ಪ್ರಿಯಾಂಕ ಚತುರ್ವೇದಿ ಅಮಾನತುಗೊಂಡ 12 ಮಂದಿ ರಾಜ್ಯಸಭಾ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.

ತಮ್ಮ ರಾಜೀನಾಮೆ ಪತ್ರವನ್ನು ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಕಳುಹಿಸಿರುವ ಸಂಸದೆ ಪ್ರಿಯಾಂಕ ಚತುರ್ವೇದಿ ಅದರಲ್ಲಿ ಕಾರಣಗಳನ್ನು ವಿವರಿಸಿದ್ದಾರೆ.

ನಮ್ಮನ್ನು ಸದನದಲ್ಲಿ ಅಮಾನತು ಮಾಡಿರುವುದು ಸದನದೊಳಗೆ ನನ್ನ ಮತ್ತು ನನ್ನ ಪಕ್ಷದ ಧ್ವನಿಯನ್ನು ಹತ್ತಿಕ್ಕುವ ಕ್ರಮವಾಗಿದೆ. ಸಂಸದೀಯ ವ್ಯವಸ್ಥೆಯಲ್ಲಿ ನನ್ನ ಪ್ರಾಥಮಿಕ ಹಕ್ಕುಗಳನ್ನು ನಿರಾಕರಿಸಿದ ನಂತರ ಸಂಸದ್ ಟಿವಿಯಲ್ಲಿ ನಿರೂಪಕಿಯಾಗಿ ಮುಂದುವರಿಯಬೇಕು ಎಂದು ನನಗೆ ಅನಿಸುತ್ತಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಅಲ್ಲದೆ ಇದು ಸದಸ್ಯರಿಗೆ ಮಾಡಿರುವ ಅನ್ಯಾಯ ಎಂದು ಕೂಡ ಪ್ರಿಯಾಂಕಾ ಚತುರ್ವೇದಿ ಆಕ್ಷೇಪಿಸಿದ್ದಾರೆ.

ಈ ಅಮಾನತು ಸಂಸದೆಯಾಗಿ ನನಗೆ ಅನ್ಯಾಯ ಮತ್ತು ಅಗೌರವವಾಗಿದೆ. ಮಹಿಳಾ ಸಂಸದರಿಗೆ ತಮ್ಮ ಹಕ್ಕು-ಕರ್ತವ್ಯಗಳನ್ನು ತೋರಿಸಿಕೊಳ್ಳಲು ಇರುವ ವೇದಿಕೆ ಸಂಸದ್ ಟಿವಿಯ ಶೋ ಆಗಿದೆ. ಇಲ್ಲಿ ನನ್ನ ಕೊಡುಗೆಯನ್ನು ನಿರ್ಲಕ್ಷಿಸಿ ಅನ್ಯಾಯ ಮಾಡಲಾಗಿದೆ, ಇದು ಸಭಾಪತಿಯಾಗಿ ನಿಮಗೆ ಸರಿ ಅನ್ನಿಸಿರಬಹುದು, ನಿಮ್ಮ ನಿರ್ಧಾರಗಳನ್ನು ಗೌರವಿಸಬೇಕಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. 

ಈ ದೇಶದ ಜನರ ಪರವಾಗಿ ಮಾತನಾಡುತ್ತಿರುವ ಸಂದರ್ಭದಲ್ಲಿ ರಾಜ್ಯಸಭೆಯ ಅಧಿವೇಶನದ ಇತಿಹಾಸದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಂಸದರು ಅಮಾನತುಗೊಂಡಿರುವುದು ಮೊದಲಾಗಿರಬಹುದು. ಆದರೆ ಜನರ ಪರವಾಗಿ ಮಾತನಾಡುವುದು, ಜನರ ಪರವಾಗಿ ನಿಲ್ಲುವುದು, ಅವರಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ ಎಂದು ಸಹ ಹೇಳಿದ್ದಾರೆ.

ಸಂಸದ ಟಿವಿಯಲ್ಲಿ ಮೇರಿ ಕಹಾನಿ ಶೋ ನಡೆಸಿ ಜನಪ್ರಿಯರಾಗಿರುವ ಪ್ರಿಯಾಂಕ ಚತುರ್ವೇದಿ ತಮಗೆ ಟಿವಿ ಶೋ ನಿರೂಪಕಿಯಾಗಿ ಜವಾಬ್ದಾರಿ ನೀಡಿದ್ದಕ್ಕೆ ಇದೇ ಸಂದರ್ಭದಲ್ಲಿ ಅವರು ರಾಜ್ಯಸಭಾ ಸಭಾಪತಿ ಮತ್ತು ಲೋಕಸಭಾ ಸ್ಪೀಕರ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಸಂಸದ್ ಟಿವಿ ತಂಡಕ್ಕೆ ಸಹ ಧನ್ಯವಾದ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com