ಸೇನೆಯಿಂದ 14 ಮಂದಿ ಹತ್ಯೆ; ಎಎಫ್ಎಸ್ ಪಿಎ ರದ್ದತಿಗೆ ನಾಗಾಲ್ಯಾಂಡ್ ಸಿಎಂ ಆಗ್ರಹ
ನಾಗಾಲ್ಯಾಂಡ್ ನಲ್ಲಿ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರವನ್ನು (ಎಎಫ್ಎಸ್ ಪಿಎ) ರದ್ದುಗೊಳಿಸಬೇಕೆಂದು ಸಿಎಂ ನಿಫಿಯು ರಿಯೊ ಆಗ್ರಹಿಸಿದ್ದಾರೆ.
Published: 07th December 2021 08:11 AM | Last Updated: 07th December 2021 08:11 AM | A+A A-

ನಾಗಾಲ್ಯಾಂಡ್ ಸಿಎಂ ನಿಫಿಯು ರಿಯೊ
ಕೊಹಿಮಾ: ನಾಗಾಲ್ಯಾಂಡ್ ನಲ್ಲಿ ಭಾರತೀಯ ಸೇನೆ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ನಡೆಸಬೇಕಿದ್ದ ದಾಳಿಯಲ್ಲಿ ಸಾವನ್ನಪ್ಪಿದ್ದ 14 ಮಂದಿ ಗಣಿ ಕಾರ್ಮಿಕರ ಅಂತ್ಯ ಸಂಸ್ಕಾರ ನಡೆದಿದ್ದು ರಾಜ್ಯದಲ್ಲಿ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರವನ್ನು (ಎಎಫ್ಎಸ್ ಪಿಎ) ರದ್ದುಗೊಳಿಸಬೇಕೆಂದು ಸಿಎಂ ನಿಫಿಯು ರಿಯೊ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ, 1958 ಜಾರಿಯಲ್ಲಿದೆ. ರಾಜ್ಯಕ್ಕೂ ವಿಶೇಷ ಸ್ಥಾನಮಾನಗಳಿವೆ. ಎಎಫ್ಎಸ್ ಪಿಎ ಯನ್ನು ಜಾರಿಗೊಳಿಸುವುದು ಹಾಗೂ ರದ್ದುಗೊಳಿಸುವ ವಿಷಯವಾಗಿ ಚರ್ಚೆಗಳು ನಡೆಯಬೇಕು ಎಂದು ಕಾರ್ಮಿಕರ ಅಂತ್ಯಕ್ರಿಯೆಯ ವೇಳೆ ನಾಗಾಲ್ಯಾಂಡ್ ಸಿಎಂ ಹೇಳಿದ್ದಾರೆ.
ನಾಗಾಲ್ಯಾಂಡ್ ಗೆ ಸಂವಿಧಾನದ ಆರ್ಟಿಕಲ್ 371 (A) ವಿಶೇಷ ಸ್ಥಾನಮಾನ ನೀಡಿದ್ದು, ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯುವವರೆಗೆ ಸಂಸತ್ ನ ಯಾವುದೇ ಕಾಯ್ದೆಗಳೂ ರಾಜ್ಯಕ್ಕೆ ಅನ್ವಯವಾಗುವುದಿಲ್ಲ.
ನಾಗಾಲ್ಯಾಂಡ್ ಹಾಗೂ ನಾಗ ಮಂದಿ ಎಂದಿಗೂ ಎಎಫ್ಎಸ್ ಪಿಎಯನ್ನು ವಿರೋಧಿಸುತ್ತಿದ್ದಾರೆ. ಅದನ್ನು ರದ್ದುಗೊಳಿಸಬೇಕು, 14 ಮಂದಿ ಗಣಿ ಕಾರ್ಮಿಕರ ಬಲಿದಾನವನ್ನು ಎಂದಿಗೂ ಮರೆಯುವುದಿಲ್ಲ. ನಾವು ಈ ವಿಷಯವಾಗಿ ಒಗ್ಗಟ್ಟಿನಿಂದ ಇದ್ದೇವೆ ಎಂದು ನಿಫಿಯು ರಿಯೊ ಟ್ವೀಟ್ ನಲ್ಲಿ ತಿಳಿಸಿದ್ದಾರೆ.