ನಾಗಾಲ್ಯಾಂಡ್ ನಾಗರಿಕರ ಹತ್ಯೆ: ಹಾರ್ನ್‌ಬಿಲ್ ಉತ್ಸವ ರದ್ದು, ಸೇನೆಯ ವಿಶೇಷಾಧಿಕಾರ ರದ್ದುಪಡಿಸಲು ಒತ್ತಾಯ
ಭದ್ರತಾ ಪಡೆಗಳು 14 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ಈಗ ನಡೆಯುತ್ತಿರುವ ಪ್ರಖ್ಯಾತ ವಾರ್ಷಿಕ ಹಾರ್ನ್‌ಬಿಲ್ ಉತ್ಸವವನ್ನು ರದ್ದುಗೊಳಿಸಲು ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರ...
Published: 07th December 2021 03:19 PM | Last Updated: 07th December 2021 04:06 PM | A+A A-

ಸೇನೆಯಿಂದ ಹತರಾದ ನಾಗರಿಕರ ಅಂತ್ಯಕ್ರಿಯೆ
ಕೊಹಿಮಾ: ಭದ್ರತಾ ಪಡೆಗಳು 14 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ಈಗ ನಡೆಯುತ್ತಿರುವ ಪ್ರಖ್ಯಾತ ವಾರ್ಷಿಕ ಹಾರ್ನ್‌ಬಿಲ್ ಉತ್ಸವವನ್ನು ರದ್ದುಗೊಳಿಸಲು ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರ ನೇತೃತ್ವದ ಸಚಿವ ಸಂಪುಟ ಮಂಗಳವಾರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಲ್ಲದೆ ಸಶಸ್ತ್ರ ಪಡೆಗಳ(ವಿಶೇಷ ಅಧಿಕಾರ) ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ನಾಗಾಲ್ಯಾಂಡ್ ನಲ್ಲಿ ಪ್ರಜೆಗಳ ಹತ್ಯೆ: ಮೃತ ದೇಹವನ್ನು ಟಾರ್ಪಲ್ ಅಡಿ ಬಚ್ಚಿಡಲು ಯತ್ನಿಸಿದ್ದ ಸೇನೆ- ಸರ್ಕಾರ
ರಾಜ್ಯದ ರಾಜಧಾನಿ ಸಮೀಪದ ಕಿಸಾಮಾದ ನಾಗಾ ಹೆರಿಟೇಜ್ ವಿಲೇಜ್‌ನಲ್ಲಿ ನಡೆಯುತ್ತಿರುವ ರಾಜ್ಯದ ಅತಿದೊಡ್ಡ ಪ್ರವಾಸೋದ್ಯಮ ಮಹೋತ್ಸವ, 10 ದಿನಗಳ ಹಾರ್ನ್‌ಬಿಲ್ ಉತ್ಸವವು ಡಿಸೆಂಬರ್ 10 ರಂದು ಕೊನೆಗೊಳ್ಳಬೇಕಿತ್ತು. ಆದರೆ ನಾಗರಿಕರ ಹತ್ಯೆ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಹ ರಾಜ್ಯ ಸರ್ಕಾರ ರದ್ದುಗೊಳಿಸಿತ್ತು.
ಇದನ್ನು ಓದಿ: ನಾಗಾಲ್ಯಾಂಡ್ ಹತ್ಯೆ ತಪ್ಪಾದ ಗುರುತಿನ ಪ್ರಕರಣ: ಸಂಸತ್ ನಲ್ಲಿ ಗೃಹ ಸಚಿವ ಅಮಿತ್ ಶಾ
ಮೋನ್ ಜಿಲ್ಲೆಯಲ್ಲಿ ನಡೆದ ನಾಗರಿಕರ ಹತ್ಯೆಯ ನಂತರ ಪೂರ್ವ ನಾಗಾಲ್ಯಾಂಡ್ ಮತ್ತು ರಾಜ್ಯದ ಇತರ ಭಾಗಗಳ ಹಲವಾರು ಬುಡಕಟ್ಟುಗಳು ತಮ್ಮ ತಮ್ಮ ಮೊರುಂಗ್‌ಗಳಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು.
ಇನ್ನೂ ಮೋನ್ ಜಿಲ್ಲೆಯ ಟಿರು ಮತ್ತು ಒಟಿಂಗ್‌ನಲ್ಲಿ ಸೈನಿಕರ ಗುಂಡಿಗೆ ನಿರಾಯುಧ ಗ್ರಾಮಸ್ಥರು ಬಲಿಯಾದ ನಂತರ ಸೇನೆಯ ವಿಶೇಷಾಧಿಕಾರ ರದ್ದು ಮಾಡಿ ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.