ಶತಾಯುಷಿ ಶಿಕ್ಷಕ 'ನಂದ ಮಾಸ್ಟರ್' ನಿಧನ, ಸಂತಾಪಗಳ ಮಹಾಪೂರ
ಒಡಿಶಾದಲ್ಲಿ ಕಳೆದ ಏಳು ದಶಕಗಳಿಂದ ಮಕ್ಕಳಿಗೆ ಮತ್ತು ಗ್ರಾಮದ ಹಿರಿಯರಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದ 8ನೇ ತರಗತಿ ಪಾಸಾಗಿದ್ದ ಶತಾಯುಷಿ ಶಿಕ್ಷಕ ನಂದ ಪ್ರುಸ್ಟಿ ಅವರು ಮಂಗಳವಾರ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ...
Published: 07th December 2021 08:09 PM | Last Updated: 07th December 2021 08:09 PM | A+A A-

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಆಶೀರ್ವದಿಸುತ್ತಿರುವ ನಂದ ಮಾಸ್ಟರ್
ಭುವನೇಶ್ವರ: ಒಡಿಶಾದಲ್ಲಿ ಕಳೆದ ಏಳು ದಶಕಗಳಿಂದ ಮಕ್ಕಳಿಗೆ ಮತ್ತು ಗ್ರಾಮದ ಹಿರಿಯರಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದ 8ನೇ ತರಗತಿ ಪಾಸಾಗಿದ್ದ ಶತಾಯುಷಿ ಶಿಕ್ಷಕ ನಂದ ಪ್ರುಸ್ಟಿ ಅವರು ಮಂಗಳವಾರ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ನಿಧನಕ್ಕೆ ಸಂತಾಪಗಳ ಮಹಾಪೂರವೇ ಹರಿದು ಬಂದಿದೆ.
'ನಂದ ಮಾಸ್ಟರ್' ಎಂದೇ ಖ್ಯಾತರಾಗಿದ್ದ 104 ವರ್ಷದ ಶಿಕ್ಷಕರಿಗೆ ಕಳೆದ ನವೆಂಬರ್ 9 ರಂದು ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅವರು ನೀಡಿದ ಸುದೀರ್ಘ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ನಂದ ಮಾಸ್ಟರ್ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಮುನ್ನ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ತಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ ಕೈಮುಗಿದು ಆಶೀರ್ವದಿಸಿದ್ದರು ಮತ್ತು ಈ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ನಂದ ಮಾಸ್ಟರ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಒಡಿಶಾದಲ್ಲಿ ಶಿಕ್ಷಣದ ಸಂತೋಷವನ್ನು ಹರಡಲು ಅವರು ಮಾಡಿದ ಪ್ರಯತ್ನ ಸ್ಮರಣೀಯ. "ನಂದ ಸರ್" ಅವರನ್ನು ಮುಂದಿನ ತಲೆಮಾರು ನೆನಪಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ಗಣ್ಯರು ನಂದ ಮಾಸ್ಟರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.