ಹೆಂಡತಿ ಮೇಲೆ ಅನುಮಾನ: ರುಂಡವನ್ನೇ ಕತ್ತರಿಸಿದ ಪಾಪಿ ಪತಿ!
ಹೆಂಡತಿ ಮೇಲೆ ಅನುಮಾನಪಟ್ಟ ಪತಿಯೊಬ್ಬ, ರಾತ್ರಿ ನಿಧಿಸುವ ಸಮಯದಲ್ಲಿ ಪತ್ನಿಯನ್ನು ಅಮಾನುಷವಾಗಿ ಕೊಂದು ದೇಹದಿಂದ ತಲೆಯನ್ನು ಬೇರ್ಪಡಿಸಿ ತುಂಡರಿಸಿದ ಘಟನೆ ಹೈದರಾಬಾದಿನ ರಾಜೇಂದ್ರ ನಗರದಲ್ಲಿ ನಡೆದಿದೆ. ನಂತರ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
Published: 10th December 2021 02:28 PM | Last Updated: 10th December 2021 02:44 PM | A+A A-

ಸಾಂದರ್ಭಿಕ ಚಿತ್ರ
ಹೈದರಾಬಾದ್: ಹೆಂಡತಿ ಮೇಲೆ ಅನುಮಾನಪಟ್ಟ ಪತಿಯೊಬ್ಬ, ರಾತ್ರಿ ನಿಧಿಸುವ ಸಮಯದಲ್ಲಿ ಪತ್ನಿಯನ್ನು ಅಮಾನುಷವಾಗಿ ಕೊಂದು ದೇಹದಿಂದ ತಲೆಯನ್ನು ಬೇರ್ಪಡಿಸಿ ತುಂಡರಿಸಿದ ಘಟನೆ ಹೈದರಾಬಾದಿನ ರಾಜೇಂದ್ರ ನಗರದಲ್ಲಿ ನಡೆದಿದೆ. ನಂತರ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಘಟನೆ ಹಿನ್ನೆಲೆ: 14 ವರ್ಷಗಳ ಹಿಂದೆ ಸಮ್ರಿನ್ ಬೇಗಂ ಎನ್ನುವ ಯುವತಿಯನ್ನು ಆರೋಪಿ ಫರ್ವೇಜ್ ವಿವಾಹವಾಗಿದ್ದ. ಆದರೆ, ಗಂಡನ ಹಿಂಸೆ ತಾಳಲಾಗದೆ ಸಮ್ರಿನ್ ಬೇಗಂ ಈ ಮೊದಲೇ ವಿಚ್ಚೇದನ ಪಡೆದು ಬೇರೆಯಾಗಿದ್ದರು. ಈ ನಡುವೆ ಕಳೆದ ವರ್ಷ ಇಬ್ಬರೂ ಬಾಳಬೇಕೆಂದು ನಿರ್ಧರಿಸಿ ಪುನ: ಮದುವೆ ಮಾಡಿಕೊಂಡಿದ್ದರು. ಅಂದಿನಿಂದಲೂ ಹೆಂಡತಿ ಮೇಲೆ ಅನುಮಾನ ಶುರುವಾಗಿತ್ತು.
ಇದೇ ವಿಚಾರವಾಗಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಆದರೆ, ಇಂದು ಬೆಳಿಗ್ಗೆ 4 ಗಂಟೆಗೆ ಮನೆಗೆ ಹೋದ ಫರ್ವೇಜ್ ಹೆಂಡತಿ ನಿದ್ರೆಯಲ್ಲಿದ್ದ ವೇಳೆ ಕತ್ತಿಯಿಂದ ದಾಳಿ ಮಾಡಿದ್ದಾನೆ. ಇಷ್ಟಕ್ಕೆ ಆತನ ಕೋಪ ತೀರದೆ ಆಕೆಯ ದೇಹದಿಂದ ತಲೆಯನ್ನು ಬೇರ್ಪಡಿಸಿ, ಪಕ್ಕದಲ್ಲೇ ಇದ್ದ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಹೆಂಡತಿ ಮೇಲಿನ ಅನುಮಾನದಿಂದ ಈ ರೀತಿ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.