ತಮಿಳುನಾಡು: ಗಾಯಗೊಂಡಿದ್ದ ಕೋತಿಗೆ ಮರುಜೀವ ನೀಡಿದ ಚಾಲಕ, ವಿಡಿಯೋ ವೈರಲ್

ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದ ಕೋತಿಯೊಂದರ ಪ್ರಾಣವನ್ನು ಚಾಲಕನೋರ್ವ ಉಳಿಸಿರುವ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದ್ದು, ಚಾಲಕ ಕೋತಿ ಪ್ರಾಣವನ್ನು ಉಳಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.
ಕೋತಿಗೆ ಮರು ಜೀವ ನೀಡಿದ ಕಾರು ಚಾಲಕ ಪ್ರಭು
ಕೋತಿಗೆ ಮರು ಜೀವ ನೀಡಿದ ಕಾರು ಚಾಲಕ ಪ್ರಭು

ಪೆರಂಬಲೂರು: ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದ ಕೋತಿಯೊಂದರ ಪ್ರಾಣವನ್ನು ಚಾಲಕನೋರ್ವ ಉಳಿಸಿರುವ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದ್ದು, ಚಾಲಕ ಕೋತಿ ಪ್ರಾಣವನ್ನು ಉಳಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

ತಮಿಳುನಾಡಿನ ಪೆರಂಬಲೂರಿನ ಕುನ್ನಂ ತಾಲೂಕಿನ 38 ವರ್ಷದ ವ್ಯಕ್ತಿಯೊಬ್ಬರು ಕೋತಿ ಜೀವ ಉಳಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಗಾಯಗೊಂಡು ನಿತ್ರಾಣವಾಗಿದ್ದ ಕೋತಿಗೆ ಮರುಜೀವ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡಿ.9ರಂದು ಕುನ್ನಂ ತಾಲೂಕಿನ ಒಥಿಯಂ ಸಮತುವಪುರಂ ಎಂಬಲ್ಲಿ ಕೋತಿಯೊಂದನ್ನು ಬೀದಿನಾಯಿಗಳು ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡಿದ್ದವು. ನಾಯಿಗಳು ಕೋತಿಗೆ ಕಚ್ಚಿ ಗಾಯ ಮಾಡಿದ್ದವು. ನಾಯಿಗಳಿಂದ ತಪ್ಪಿಸಿಕೊಳ್ಳಲು ಕೋತಿ ಮರವೇರಿತ್ತು.  ಮರದ ಮೇಲೆ ಗಾಯಗೊಂಡಿದ್ದ ಕೋತಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ಇದನ್ನು ಕಂಡ ಕಾರು ಚಾಲಕ ಎಂ ಪ್ರಭು ಕೂಡಲೇ ನಾಯಿಗಳನ್ನು ಅಲ್ಲಿಂದ ಓಡಿಸಿ,  ಆ ಮುಳ್ಳಿನ ಮರವನ್ನು ಏರಿ ಕೋತಿಯನ್ನು ಕೆಳಗೆ ತಂದಿದ್ದಾರೆ.

ಬಳಿಕ ಅದಕ್ಕೆ ನೀರು ಕೊಟ್ಟು ತನ್ನ ಸ್ನೇಹಿತರ ಸಹಾಯದೊಂದಿಗೆ ದ್ವಿಚಕ್ರ ವಾಹನದಲ್ಲಿ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾರು. ಆದರೆ ಪೆರಂಬಲೂರು-ಅರಿಯಲೂರು ರಸ್ತೆಯಲ್ಲಿ ಸಾಗುತ್ತಿದ್ದಾಗ ಕೋತಿಯ ಶ್ವಾಸ ನಿಧಾನವಾಗಿ ಕ್ಷೀಣಿಸುತ್ತಿರುವುದನ್ನು ಕಂಡ ಪ್ರಭು ಕೂಡಲೇ ಕೋತಿಗೆ ರಸ್ತೆಯಲ್ಲೇ ಹೃದಯದ ಪಂಪ್ ಮಾಡಲು ಆರಂಭಿಸಿದರು. ಅದರ ಬಾಯಿಗೆ ತಮ್ಮ ಬಾಯಿ ಇಟ್ಟು ಉಸಿರು ನೀಡುವ ಮೂಲಕ ಅದು ಮತ್ತೆ ಉಸಿರಾಡುವಂತೆ ಮಾಡುವ ಪ್ರಯತ್ನ ಮಾಡಿದರು.  ಬಳಿಕ ಕೋತಿಯನ್ನು ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯಲ್ಲಿ ಕೋತಿಗೆ ಲಸಿಕೆ ಮತ್ತು ಗ್ಲೂಕೋಸ್ ನೀಡಲಾಯಿತು. ಬಳಿಕ ಚೇತರಿಸಿಕೊಂಡ ಕೋತಿಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪ್ರಭು, "ಮಂಗವು ಗಾಯಗೊಂಡು ಮರ ಏರಿ ಪ್ರಜ್ಞೆ ತಪ್ಪಿದಾಗ ನನಗೆ ಭಯವಾಯಿತು. ನಾನು ಅದನ್ನು ರಕ್ಷಿಸಿ ನೀರು ಕೊಟ್ಟೆ. ಆದರೆ ಅದು ಕುಡಿಯಲಿಲ್ಲ. ಅದು ಕಾಡಿನಲ್ಲಿ ಗಂಭೀರ ಸ್ಥಿತಿಯಲ್ಲಿತ್ತು. ನಾನು ಯಾವುದರ ಬಗ್ಗೆಯೂ ಯೋಚಿಸದೇ ಅದರ ಬಾಯಿಗೆ ಬಾಯಿಟ್ಟು ಉಸಿರು ಕೊಡುವ ಪ್ರಯತ್ನ ಮಾಡಿದೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಕೊಂಡೊಯ್ದಾಗ ಅದು ಸತ್ತೇ ಹೋಗಿದೆ ಎಂದುಕೊಂಡಿದ್ದೆ ಆದರೆ ಚಿಕಿತ್ಸೆ ಫಲಕಾರಿಯಾಗಿ ಪ್ರಜ್ಞೆ ಬಂದಿತ್ತು ಎಂದು ಹೇಳಿದರು.

ನಾನು 2010 ರಲ್ಲಿ ತಂಜಾವೂರಿನಲ್ಲಿ ಪ್ರಥಮ ಚಿಕಿತ್ಸಾ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಇದು ಕೋತಿಯನ್ನು ಮನುಷ್ಯನಂತೆ ಪರಿಗಣಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು. ಪ್ರಾಣಿಗಳು ಆಹಾರಕ್ಕಾಗಿ ಅರಣ್ಯದಿಂದ ಪಟ್ಟಣಗಳಿಗೆ ಬರುತ್ತವೆ. ನಾವು ಉಳಿದ ಆಹಾರವನ್ನು ಕೊಟ್ಟರೆ ಅವುಗಳಿಂದ ಪ್ರಯೋಜನ ಪಡೆಯುತ್ತವೆ" ಎಂದು ಅವರು ಹೇಳಿದರು.

ಪಶು ವೈದ್ಯಾಧಿಕಾರಿ ಪ್ರಭಾಕರ ಮಾತನಾಡಿ, ‘ಕೋತಿಗೆ ರೇಬಿಸ್ ಸೋಂಕಿತ ನಾಯಿಗಳು ಕಚ್ಚಿದರೆ ಪ್ರಭುವಿಗೆ ಕಾಯಿಲೆ ಬರಬಹುದು. ಇಲ್ಲದಿದ್ದರೆ ತೊಂದರೆ ಇಲ್ಲ ಎಂದರು. ಅಂತೆಯೇ ಕೋತಿಗೆ ಎಂಟು ತಿಂಗಳ ವಯಸ್ಸಿರಬಹುದು ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com