ಹೆಲಿಕಾಪ್ಟರ್ ಪತನ: ಭೋಪಾಲ್‌ನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅಂತ್ಯಕ್ರಿಯೆ
ಕಳೆದ ವಾರ ತಮಿಳುನಾಡಿನ ಕೂನೂರು ಬಳಿ ರಕ್ಷಣಾ ಪಡೆಗಳ ಮುಖ್ಯಸ್ಥ ಜರಲ್ ಬಿಪಿನ್ ರಾವತ್ ಸೇರಿ 13 ಮಂದಿಯನ್ನು ಬಲಿಪಡೆದಿದ್ದ ಹೆಲಿಕಾಫ್ಟರ್ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು...
Published: 17th December 2021 03:09 PM | Last Updated: 17th December 2021 03:09 PM | A+A A-

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮತ್ತು ಸೇನಾ ಹೆಲಿಕಾಪ್ಟರ್ ದುರಂತದ ಸಂಗ್ರಹ ಚಿತ್ರ
ಭೋಪಾಲ್: ಕಳೆದ ವಾರ ತಮಿಳುನಾಡಿನ ಕೂನೂರು ಬಳಿ ರಕ್ಷಣಾ ಪಡೆಗಳ ಮುಖ್ಯಸ್ಥ ಜರಲ್ ಬಿಪಿನ್ ರಾವತ್ ಸೇರಿ 13 ಮಂದಿಯನ್ನು ಬಲಿಪಡೆದಿದ್ದ ಹೆಲಿಕಾಫ್ಟರ್ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಶುಕ್ರವಾರ ಭೋಪಾಲ್‌ನಲ್ಲಿ ಸಂಪೂರ್ಣ ಸೇನಾ ಮತ್ತು ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಯಿತು.
ತ್ರಿವರ್ಣ ಧ್ವಜದಲ್ಲಿ ಸುತ್ತಿದ್ದ ಪಾರ್ಥಿವ ಶರೀರವನ್ನು ಇಲ್ಲಿನ ಮಿಲಿಟರಿ ಆಸ್ಪತ್ರೆಯಿಂದ ಬೈರಾಗರ್ ಪ್ರದೇಶದ ಸ್ಮಶಾನ ಭೂಮಿಗೆ ಸೇನಾ ಟ್ರಕ್‌ನಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಈ ವೇಳೆ ಜನ 'ಭಾರತ್ ಮಾತಾ ಕಿ ಜೈ' ಮತ್ತು 'ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅಮರ್ ರಹೇ' ಎಂಬ ಘೋಷಣೆಗಳನ್ನು ಕೂಗಿದರು.
ಇದನ್ನು ಓದಿ: ಹೆಲಿಕಾಪ್ಟರ್ ದುರಂತ: ರಕ್ಷಣೆ ಮಾಡಲು ಬಂದವರ ಬಳಿ ವರುಣ್ ಸಿಂಗ್ ಉಳಿದವರನ್ನು ರಕ್ಷಿಸಲು, ಪತ್ನಿಗೆ ಕರೆ ಮಾಡಲು ಕೇಳಿದ್ದರು
ಪಾರ್ಥೀವ ಶರೀರ ಸ್ಮಶಾನ ಭೂಮಿ ತಲುಪುತ್ತಿದ್ದಂತೆ ರಕ್ಷಣಾ ಪಡೆ ಸಿಬ್ಬಂದಿಯಿಂದ ವಿಧ್ಯುಕ್ತ ಗೌರವ ವಂದನೆ ಸಲ್ಲಿಸಲಾಯಿತು, ನಂತರ ಹಿರಿಯ ಸೇನಾ ಅಧಿಕಾರಿಗಳು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಗೆ ಪುಷ್ಪನಮನ ಸಲ್ಲಿಸಿದ್ದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವ್ ಸಾರಂಗ್ ಅವರು ಸಹ ವಾಯುಪಡೆಯ ಯೋಧನಿಗೆ ಗೌರವ ಸಲ್ಲಿಸಿದರು.