ಮುಂದಿನ CDS ಆಯ್ಕೆ ಪ್ರಕ್ರಿಯೆ ಆರಂಭ, ಸದ್ಯದಲ್ಲಿಯೇ ಹೆಸರು ಅಂತಿಮಗೊಳಿಸಿ ಘೋಷಣೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಭಾರತದ ರಕ್ಷಣಾ ಪಡೆ(CDS) ಮುಖ್ಯಸ್ಥರಾಗಿದ್ದ ಜ.ಬಿಪಿನ್ ರಾವತ್ ತಮಿಳು ನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹಠಾತ್ ಆಗಿ ನಿಧನ ಹೊಂದಿದ ನಂತರ ಅವರ ಉತ್ತರಾಧಿಕಾರಿ ಎಂಬ ಪ್ರಶ್ನೆ ಉದ್ಭವವಾಗಿದೆ. ಅವರ ಉತ್ತರಾಧಿಕಾರಿಯನ್ನು ನೇಮಿಸುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Published: 17th December 2021 09:53 AM | Last Updated: 17th December 2021 12:44 PM | A+A A-

ಜ.ಬಿಪಿನ್ ರಾವತ್
ನವದೆಹಲಿ: ಭಾರತದ ರಕ್ಷಣಾ ಪಡೆ(CDS) ಮುಖ್ಯಸ್ಥರಾಗಿದ್ದ ಜ.ಬಿಪಿನ್ ರಾವತ್ ತಮಿಳು ನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹಠಾತ್ ಆಗಿ ನಿಧನ ಹೊಂದಿದ ನಂತರ ಅವರ ಉತ್ತರಾಧಿಕಾರಿ ಎಂಬ ಪ್ರಶ್ನೆ ಉದ್ಭವವಾಗಿದೆ. ಅವರ ಉತ್ತರಾಧಿಕಾರಿಯನ್ನು ನೇಮಿಸುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಡೈರೆಕ್ಟರೇಟ್ ಜನರಲ್ ಡಿಫೆನ್ಸ್ ಎಸ್ಟೇಟ್ ನ 96ನೇ ರೈಸಿಂಗ್ ಡೇ ಪ್ರಯುಕ್ತ ಎಕ್ಸಲೆನ್ಸ್ 2021ರ ಪ್ರಶಸ್ತಿ ಪ್ರದಾನ ಸಮಾರಂಭದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದ ರಕ್ಷಣಾ ಸಚಿವರು, ಮುಂದಿನ ಸಿಡಿಎಸ್ ನೇಮಕ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು ಸದ್ಯದಲ್ಲಿಯೇ ಹೆಸರು ಘೋಷಣೆ ಮಾಡಲಾಗುವುದು ಎಂದರು.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಈ ಹಿಂದೆ ವರದಿ ಮಾಡಿದಂತೆ ಭಾರತೀಯ ಸೇನಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥ ಹುದ್ದೆಯಾದ ಚೀಫ್ ಆಫ್ ಸ್ಟಾಫ್ ಕಮಿಟಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಡಿಎಸ್ ರಚನೆಯೊಂದಿಗೆ, ಅಧಿಕಾರದಲ್ಲಿರುವವರು ಸಿಬ್ಬಂದಿ ಸಮಿತಿಯ ಖಾಯಂ ಅಧ್ಯಕ್ಷರಾಗುತ್ತಾರೆ.
2019ರ ಡಿಸೆಂಬರ್ ತಿಂಗಳಲ್ಲಿ, ಸುದೀರ್ಘ ಕಾಯುವಿಕೆಯ ನಂತರ ರಚಿಸಲಾದ ಸಿಡಿಎಸ್ ಹುದ್ದೆಯು ಮುಖ್ಯವಾಗಿದೆ. ಮೊದಲ ಸಿಡಿಎಸ್ ಆಗಿ, ಜನರಲ್ ರಾವತ್ ಅವರು ಅಧಿಕಾರ ವಹಿಸಿಕೊಂಡು, ದೇಶದ ಉನ್ನತ ರಕ್ಷಣಾ ನಿರ್ವಹಣೆಯ ಪ್ರಮುಖ ಸುಧಾರಣೆಗಳು ಮತ್ತು ಮರು ಸಂಘಟನೆಯನ್ನು ಪ್ರಾರಂಭಿಸಿದರು.
ರಕ್ಷಣಾ ಸಚಿವಾಲಯದಲ್ಲಿ ಮಿಲಿಟರಿ ವ್ಯವಹಾರಗಳ (DMA) ವಿಭಾಗದ ಮುಖ್ಯಸ್ಥರಾಗಲು ಮತ್ತು ಅದರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು, ರಕ್ಷಣಾ ಸಚಿವರಿಗೆ ಪ್ರಧಾನ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದು ಇತ್ಯಾದಿ ಕೆಲಸಗಳು ಸಿಡಿಎಸ್ ಆದವರಿಗಿರುತ್ತದೆ.