2018ರ ಬೋದ್ ಗಯಾ ಸ್ಫೋಟ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ, 5 ಮಂದಿಗೆ 10 ವರ್ಷ ಜೈಲು

2018ರ ಬೋದ್ ಗಯಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, 5 ಮಂದಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಭೋದ್ ಗಯಾ ಸ್ಫೋಟ ಪ್ರಕರಣ
ಭೋದ್ ಗಯಾ ಸ್ಫೋಟ ಪ್ರಕರಣ

ನವದೆಹಲಿ: 2018ರ ಬೋದ್ ಗಯಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, 5 ಮಂದಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2018 ರಲ್ಲಿ ಬೋಧಗಯಾದ (Bodh Gaya)ಮಹಾಬೋಧಿ ದೇವಾಲಯದ ಸಂಕೀರ್ಣದಲ್ಲಿ ಸ್ಫೋಟಕಗಳನ್ನಿರಿಸಿದ್ದಕ್ಕಾಗಿ (IEDs) ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (JMB) ಭಯೋತ್ಪಾದಕ ಗುಂಪಿಗೆ ಸೇರಿದ ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು 5 ಮಂದಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎಐಎ ವಿಶೇಷ ನ್ಯಾಯಾಲಯವು ಶುಕ್ರವಾರ ಪ್ರಕಟಿಸಿದೆ. 

ಪೈಗಂಬರ್ ಶೇಖ್, ಅಹ್ಮದ್ ಅಲಿ, ನೂರ್ ಆಲಂ ಮೊಮಿನ್, ಆದಿಲ್ ಶೇಖ್, ದಿಲ್ವಾರ್ ಹುಸೇನ್, ಅಬ್ದುಲ್ ಕರೀಂ, ಮುಸ್ತಾಫಿಜುರ್ ರೆಹಮಾನ್ ಮತ್ತು ಆರಿಫ್ ಹುಸೇನ್ ಅವರನ್ನು ಶುಕ್ರವಾರ ಐಪಿಸಿ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (Unlawful Activities (Prevention) Act )ಮತ್ತು ಸ್ಫೋಟಕ ವಸ್ತು ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದೆ. 

ಪೈಗಂಬರ್ ಶೇಖ್, ಅಹ್ಮದ್ ಅಲಿ ಮತ್ತು ನೂರ್ ಆಲಂ ಮೊಮಿನ್​​ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.  ಈ ಪ್ರಕರಣವು ಬೋಧಗಯಾ ದೇವಾಲಯದ ಆವರಣದಲ್ಲಿ ಮತ್ತು ಸುತ್ತಮುತ್ತ ಮೂರು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಇರಿಸಿರುವುದಕ್ಕೆ ಸಂಬಂಧಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿ ತಿಳಿಸಿದ್ದಾರೆ. ಕಲ್ಚಕ್ರ ಮೈದಾನದ ಗೇಟ್ ಸಂಖ್ಯೆ 5 ರಲ್ಲಿ ಪತ್ತೆಯಾದ ಮೊದಲ ಐಇಡಿ, ಅದನ್ನು ಇಡುವ ಹೊತ್ತಲ್ಲಿ ಸ್ಫೋಟಗೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶ್ರೀಲಂಕಾ ಮಠದ ಬಳಿ ಮತ್ತು ಮಹಾಬೋಧಿ ದೇವಸ್ಥಾನದ ಗೇಟ್ ಸಂಖ್ಯೆ 4 ರ ಮೆಟ್ಟಿಲುಗಳಲ್ಲಿ ಇನ್ನೂ ಎರಡು ಸಜೀವ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ದಲೈಲಾಮಾ ಮತ್ತು ಬಿಹಾರದ ರಾಜ್ಯಪಾಲರ ಭೇಟಿಯ ಸಂದರ್ಭದಲ್ಲಿ ಅಪರಾಧಿಗಳು ದೇವಾಲಯದ ಸಂಕೀರ್ಣದಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಇರಿಸುವ ಮೂಲಕ ಸಂಚು ರೂಪಿಸಿದ್ದಾರೆ ಎಂದು ಎನ್ಐಎ ಅಧಿಕಾರಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಎನ್ಐಎ ಅಧಿಕಾರಿಯೊಬ್ಬರು, 'ಅರೋಪಿಗಳು ಪರಸ್ಪರ ಸಂಪರ್ಕಿಸಿ, ಒಟ್ಟಿಗೆ ಪ್ರಯಾಣಿಸಿದ್ದರು. ಅಲ್ಲದೆ ಸ್ಫೋಟಕ್ಕೆ ಸಂಚು ರೂಪಿಸಿ ಸ್ಫೋಟಕಗಳನ್ನು ಸಂಗ್ರಹಿಸಿದರು. ಜನವರಿ 19, 2018 ರಂದು ದೇವಾಲಯದ ಸಂಕೀರ್ಣದಲ್ಲಿ ಈ ಮೂರು ಐಇಡಿಗಳನ್ನು ತಯಾರಿಸಿ ಅಲ್ಲಿರಿಸಿದರು ಎಂದು ಅಧಿಕಾರಿ ಹೇಳಿದರು. ಪ್ರಕರಣದ ಚಾರ್ಜ್ ಶೀಟ್ ಅನ್ನು ಸೆಪ್ಟೆಂಬರ್, 2018 ರಲ್ಲಿ ಸಲ್ಲಿಸಲಾಯಿತು.ನಂತರ ಪೂರಕ ಚಾರ್ಜ್ ಶೀಟ್ ಅನ್ನು ಜನವರಿ 2019 ರಲ್ಲಿ ಸಲ್ಲಿಸಲಾಯಿತು ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com