ಚೆನ್ನೈ: ಪತ್ನಿ ನೆರವಿನಿಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ದೇವಮಾನವನ ಬಂಧನ
ಪತ್ನಿಯ ನೆರವಿನಿಂದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಸ್ವಯಂ ಘೋಷಿತ ದೇವಮಾನವ ಮತ್ತು ಆತನ ಪತ್ನಿಯನ್ನು ಚೆನ್ನೈ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Published: 19th December 2021 12:08 PM | Last Updated: 19th December 2021 12:08 PM | A+A A-

ಸತ್ಯನಾರಾಯಣನ್
ಚೆನ್ನೈ: ಪತ್ನಿಯ ನೆರವಿನಿಂದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಸ್ವಯಂ ಘೋಷಿತ ದೇವಮಾನವ ಮತ್ತು ಆತನ ಪತ್ನಿಯನ್ನು ಚೆನ್ನೈ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಗಳು ಬಾಲಕಿಯ ಬೆತ್ತಲೆ ಚಿತ್ರಗಳನ್ನು ತೆಗೆದು, ಗರ್ಭಪಾತ ಮಾಡಿಸಿಕೊಳ್ಳದಿದ್ದರೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಆರೋಪಿ ಸತ್ಯನಾರಾಯಣನ್ ಮತ್ತು ಆತನ ಪತ್ನಿ ಪುಷ್ಪಲತಾ ನಗರದ ‘ಶಿರಡಿಪುರಂ ಸರ್ವ ಶಕ್ತಿ ಪೀಠದ ಸಾಯಿಬಾಬಾ ಕೊಯಿಲ್’ ಎಂಬ ದೇವಸ್ಥಾನ ಹೊಂದಿದ್ದಾರೆ. ಪುಷ್ಪಲತಾ 16 ವರ್ಷದ ಸಂತ್ರಸ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪತಿ ಸತ್ಯ ನಾರಾಯಣನ್‌ಗೆ ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಾನು 12ನೇ ತರಗತಿಯಲ್ಲಿದ್ದಾಗ ನನ್ನ ಅಜ್ಜಿಯ ಮನೆಯಲ್ಲಿಯೇ ಇದ್ದೆ. ನಾವು ಆಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಿದ್ದೆವು ಮತ್ತು ಏಪ್ರಿಲ್ 12, 2016 ರಂದು ಪವಿತ್ರ ಬೂದಿಯನ್ನು ಪಡೆಯಲು ನನ್ನನ್ನು ಕೇಳುಹಿಸಲಾಯಿತು. ನಾನು ದೇವಸ್ಥಾನಕ್ಕೆ ಹೋದಾಗ ಪುಷ್ಪಲತಾ ನನಗೆ ಜ್ಯೂಸ್ ಕೊಟ್ಟಳು ಮತ್ತು ಎರಡು ಗಂಟೆಗಳ ನಂತರ ನಾನು ಬಟ್ಟೆ ಇಲ್ಲದೆ ಹಾಸಿಗೆಯ ಮೇಲೆ ಮಲಗಿದ್ದೆ” ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆಯ ಮೇಲೆ ಪಾಪದ ಹೊರೆ ಇದೆ ಎಂದು ಹೇಳಿದ್ದ ಸತ್ಯನಾರಾಯಣನ್, ಆಕೆಯನ್ನು ಅದರಿಂದ ಮುಕ್ತಗೊಳಿಸಬೇಕು ಎಂದು ಹೇಳಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿಗೆ ಫೋಟೋಗಳನ್ನು ತೋರಿಸಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ಸ್ಥಳದಿಂದ ಹೊರಬಂದು 2018ರಲ್ಲಿ ಮದುವೆಯಾಗಿದ್ದರು ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಆಕೆಯ ಪತಿ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ ನಂತರ, ಸತ್ಯನಾರಾಯಣನ್ ಅವರು ಮಾರ್ಚ್ 2020ರಲ್ಲಿ ಸಂತ್ರಸ್ತೆಗೆ ಕರೆ ಮಾಡಿದ್ದರು. “ಅವರು ನಾನು ಒಬ್ಬಂಟಿಯಾಗಿದ್ದೇನೆ ಎಂದು ತಿಳಿದುಕೊಂಡರು ಮತ್ತು ತಮ್ಮನ್ನು ಭೇಟಿ ಮಾಡುವಂತೆ ಬೆದರಿಕೆ ಹಾಕಿದರು, ಇಲ್ಲದಿದ್ದರೆ ಅವರು ನನ್ನ ಪತಿಗೆ ಫೋಟೋಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿದರು. ನಾನು ಮತ್ತೆ ಸತ್ಯನಾರಾಯಣನ್ ಅವರನ್ನು ಭೇಟಿ ಮಾಡುವಂತೆ ಬಲವಂತ ಮಾಡಲಾಯಿತು. ಭೇಟಿ ಮಾಡಿದ ನಂತರದ ತಿಂಗಳುಗಳಲ್ಲಿ ಅವರು ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದರು” ಎಂದು ಸಂತ್ರಸ್ತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಜುಲೈ 2020 ರಲ್ಲಿ, ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆಂದು ತಿಳಿದುಕೊಂಡ ದೇವಮಾನವ ಮತ್ತು ಆತನ ಹೆಂಡತಿ ಗರ್ಭಪಾತ ಮಾಡಿಸುವಂತೆ ಬೆದರಿಕೆ ಹಾಕಿದರು. ಆದರೆ ಇದಕ್ಕೆ ಒಪ್ಪದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ಈ ವರ್ಷದ ಜನವರಿಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು.
ಸಂತ್ರಸ್ತೆಯ ಪತಿ ಕುಟುಂಬವನ್ನು ಭೇಟಿ ಮಾಡಿ ನವೆಂಬರ್‌ನಲ್ಲಿ ಮತ್ತೆ ವಿದೇಶಕ್ಕೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಕಾಮುಕ ಸತ್ಯನಾರಾಯಣನ್ ಮತ್ತೆ ಸಂತ್ರಸ್ತೆಗೆ ತನ್ನನ್ನು ಭೇಟಿ ಮಾಡುವಂತೆ ಒತ್ತಾಯಿಸಿದ್ದ. ಈ ಬಾರಿ ಸಂತ್ರಸ್ತೆ ಪತಿಗೆ ಮಾಹಿತಿ ನೀಡಿದ್ದು, ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸತ್ಯನಾರಾಯಣನ್ ಮತ್ತು ಆತನ ಪತ್ನಿಯನ್ನು ಬಂಧಿಸಿದ್ದಾರೆ.