ಯುದ್ಧ ವಿಮಾನ ಅಪಘಾತ ತಡೆಗೆ ಐವಿಎಚ್‍ಎಂ ತಂತ್ರಜ್ಞಾನ: ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್

ಭಾರತೀಯ ವಾಯುಪಡೆ (ಐಎಎಫ್) ಯುದ್ಧ ವಿಮಾನಗಳು ತಾಂತ್ರಿಕ ತೊಂದರೆಗಳಿಂದ ಪತನಗೊಳ್ಳುವುದನ್ನು ತಡೆಯಲು ಸಮಗ್ರ ವಾಹನ ಆರೋಗ್ಯ ನಿರ್ವಹಣೆ (ಐವಿಎಚ್‍ಎಂ) ನೆರವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ಪ್ರತಿಪಾದಿಸಿದ್ದಾರೆ.
ಡಾ.ವಿ.ಕೆ ಸಾರಸ್ವತ್
ಡಾ.ವಿ.ಕೆ ಸಾರಸ್ವತ್

ಬೆಂಗಳೂರು: ಭಾರತೀಯ ವಾಯುಪಡೆ (ಐಎಎಫ್) ಯುದ್ಧ ವಿಮಾನಗಳು ತಾಂತ್ರಿಕ ತೊಂದರೆಗಳಿಂದ ಪತನಗೊಳ್ಳುವುದನ್ನು ತಡೆಯಲು ಸಮಗ್ರ ವಾಹನ ಆರೋಗ್ಯ ನಿರ್ವಹಣೆ (ಐವಿಎಚ್‍ಎಂ) ನೆರವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ಪ್ರತಿಪಾದಿಸಿದ್ದಾರೆ.

ವೈಬ್ರೇಷನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ (ಟಿವಿಐಐ), ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಇತರ ಐಐಟಿ ಕಾಲೇಜುಗಳು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ವೈಬ್ರೇಷನ್ ಇಂಜಿನಿಯರಿಂಗ್ ಮತ್ತು ಯಂತ್ರಗಳ ತಂತ್ರಜ್ಞಾನ ಸಮ್ಮೇಳನ 2021- `ವೆಟೋಮ್ಯಾಕ್’ ಸಮ್ಮೇಳನ ಉದ್ದೇಶಿಸಿ ಡಿ.18 ರಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.

ಸಮಗ್ರ ವಾಹನ ಆರೋಗ್ಯ ನಿರ್ವಹಣೆ (ಇಂಟಿಗ್ರೇಟೆಡ್ ವೆಹಿಕಲ್ ಹೆಲ್ತ್ ಮ್ಯಾನೇಜ್ಮೆಂಟ್-ಇವಿಎಚ್‍ಎಂ) ಇವಿಎಚ್‍ಎಂ ತಂತ್ರಜ್ಞಾನ, ಯುದ್ಧ ವಿಮಾನಗಳಲ್ಲಿನ ಲೋಪದೋಷಗಳನ್ನು ಸ್ಥಳದಲ್ಲಿಯೇ ಪತ್ತೆಹಚ್ಚುವ ಸಾಮಥ್ರ್ಯ ಹೊಂದಿದೆ. ಇದರಿಂದ ವಿಮಾನ ಹಾರಾಡುವಾಗಲೇ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಇದರಿಂದ ವಿಮಾನ ಅಪಘಾತದಂತಹ ಅವಘಡಗಳು ಕಡಿಮೆಯಾಗುತ್ತವೆ ಎಂದರು.

ಭಾರತೀಯ ವಾಯುಪಡೆ ಈಗಾಗಲೇ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಯುದ್ಧ ವಿಮಾನಗಳಾದ ಎಲ್ಸಿಎ ಎಂಕೆ1, ಎಂಕೆ2, ಎಎಂಸಿಎ, ಯುಸಿಎವಿ, ಆರ್ಟಿಎ90 ಈ ತಂತ್ರಜ್ಞಾನ ಹೊಂದಿದೆ. ಸದ್ಯ ಪ್ರಗತಿಯಲ್ಲಿರುವ ನಿಶಾಂತ್, ತೇಜಸ್ ಹಾಗೂ ಸರಾಸ್ ವಿಮಾನಗಳಲ್ಲಿ ಕೂಡ ಈ ಐವಿಎಚ್‍ಎಂ ಅಳವಡಿಕೆಯಾಗಲಿದೆ ಎಂದರು.

ಈ ತಂತ್ರಜ್ಞಾನ ಸುರಕ್ಷತಾ ಕ್ರಮಗಳಲ್ಲಿ ರಾಜಿಯಾಗದೆ ವಿಮಾನಗಳು ಮಾತ್ರವಲ್ಲ ಇತರ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆಗೊಳಿಸುತ್ತದೆ. ಆದರೆ, ಎಲ್ಲಾ ವಿಮಾನಗಳಲ್ಲಿ ಇದನ್ನು ಬಳಕೆ ಮಾಡುವ ಕುರಿತು ಇನ್ನಷ್ಟು ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ. ಇದು ಸೆನ್ಸಾರ್ ನಿರ್ವಹಣೆ, ಕಾರ್ಯಕ್ಷಮತೆ ಮತ್ತು ದತ್ತಾಂಶಗಳನ್ನು ನಿರ್ವಹಿಸುತ್ತದೆ.

ನಂತರ ಮಾತನಾಡಿದ ಐಐಟಿ ವಾರಣಾಸಿಯ ಅಧ್ಯಕ್ಷ ಡಾ.ಕೋಟಾ ಹರಿನಾರಾಯಣ, ನಾಗರಿಕ ಮತ್ತು ಸೇನಾ ವಿಮಾನಗಳಿಗೆ ಭಾರತ ಬಹುದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಈ ಕ್ಷೇತ್ರದಲ್ಲಿ ಸಾಕಷ್ಟು ತಾಂತ್ರಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯುವ ಅಗತ್ಯವಿದೆ. ಸರ್ಕಾರ ಇದರತ್ತ ಹೆಚ್ಚಿನ ಗಮನ ಹರಿಸಿದಲ್ಲಿ, ಶೀಘ್ರದಲ್ಲೇ ಭಾರತ ಈ ತಂತ್ರಜ್ಞಾನದ ಮುಂಚೂಣಿಯ ರಫ್ತುದಾರರಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಮೆಕ್ಯಾನಿಕಲ್ ಕ್ಷೇತ್ರದ 118 ಸಂಶೋಧನಾ ವರದಿಗಳು ಮಂಡನೆಯಾದವು. ಇದರಲ್ಲಿ ಸುಮಾರು 68 ಜನರು ಆನ್‍ಲೈನ್ ಮೂಲಕ ವರದಿಗಳನ್ನು ಮಂಡಿಸಿದರು. 

ಕಾರ್ಯಕ್ರಮದಲ್ಲಿ ವೆಟೋಮ್ಯಾಕ್ ಸಮ್ಮೇಳನದ ಅಧ್ಯಕ್ಷ ಡಾ. ನಳಿನಾಕ್ಷ್ ವ್ಯಾಸ್, ಬಿಎಂಎಸ್ಸಿಇ ಪ್ರಾಂಶುಪಾಲರಾದ ಮುರಳೀಧರ, ಉಪ ಪ್ರಾಂಶುಪಾಲರಾದ ಕೆ.ಆರ್.ಸುರೇಶ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರುದ್ರನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com