ದೇಶದಲ್ಲಿ ಒಮಿಕ್ರಾನ್​ನ 161 ಪ್ರಕರಣಗಳು ಪತ್ತೆ: ಮನ್ಸುಖ್ ಮಾಂಡವಿಯಾ

 ಭಾರತದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್​ನ 161 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ರಾಜ್ಯಸಭೆಗೆ ತಿಳಿಸಿದರು.
ಮನ್ಸುಖ್ ಮಾಂಡವೀಯಾ
ಮನ್ಸುಖ್ ಮಾಂಡವೀಯಾ

ನವದೆಹಲಿ: ಭಾರತದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್​ನ 161 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ರಾಜ್ಯಸಭೆಗೆ ತಿಳಿಸಿದರು.

ನಾವು ತಜ್ಞರೊಂದಿಗೆ ಪ್ರತಿದಿನ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ ನಾವು ಎದುರಿಸಿದ ಸಮಸ್ಯೆಗಳನ್ನು ಈಗ ಎದುರಿಸುವುದಿಲ್ಲ. ನಾವು ಪ್ರಮುಖ ಔಷಧಿಗಳ ಬಫರ್ ಸ್ಟಾಕ್ ಅನ್ನು ಹೊಂದಿದ್ದೇವೆ ಎಂದು ಸಚಿವರು ಹೇಳಿದರು.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರ ಪ್ರಯತ್ನದಿಂದ, ಕೋವಿಡ್ ಲಸಿಕೆಯ ಮೊದಲ ಡೋಸ್‌ಗಳಲ್ಲಿ 88 ಪ್ರತಿಶತವನ್ನು ನೀಡಲಾಗಿದೆ. ಇದುವರೆಗೆ ಎರಡನೇ ಡೋಸ್​ನನ್ನು ಶೇ. 58ರಷ್ಟು ನೀಡಲಾಗಿದೆ. ಜನಸಂಖ್ಯೆಯ ಬಹುಪಾಲು ಜನರಿಗೆ ಭಾರತದಲ್ಲಿ ಇಂದು ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ದೇಶಾದ್ಯಂತ 12 ರಾಜ್ಯಗಳಲ್ಲಿ ಒಮಿಕ್ರಾನ್ ರೂಪಾಂತರದ 161 ದೃಢಪಡಿಸಿದ ಪ್ರಕರಣಗಳು ಪತ್ತೆಯಾಗಿವೆ. ಒಮಿಕ್ರಾನ್ ಸೋಂಕಿಗೆ ಒಳಗಾದ ಒಬ್ಬ ವ್ಯಕ್ತಿ ಕೂಡ ಗಂಭೀರ ಸ್ಥಿತಿಯಲ್ಲಿಲ್ಲ. ಎಲ್ಲಾ ಪ್ರಕರಣಗಳು ‘ಸೌಮ್ಯ’ವಾಗಿದ್ದು, 42 ವ್ಯಕ್ತಿಗಳು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ 54 ಒಮಿಕ್ರಾನ್ ವ್ಯತ್ಯಯ ಪ್ರಕರಣಗಳು ದೃಢಪಟ್ಟಿದ್ದು, ದೆಹಲಿಯಲ್ಲಿ 32, ತೆಲಂಗಾಣದಲ್ಲಿ 20, ರಾಜಸ್ಥಾನದಲ್ಲಿ 17, ಗುಜರಾತ್‌ನಲ್ಲಿ 13, ಕೇರಳದಲ್ಲಿ 11, ಕರ್ನಾಟಕದಲ್ಲಿ 8, ಉತ್ತರ ಪ್ರದೇಶದಲ್ಲಿ ಎರಡು ಮತ್ತು ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚಂಡೀಗಢದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿವೆ.

ದೇಶಾದ್ಯಂತ 38 ಲ್ಯಾಬ್‌ಗಳಲ್ಲಿ ಪ್ರತಿ ತಿಂಗಳು 31,000 ಮಾದರಿಗಳ ಜೀನೋಮಿಕ್ ಅನುಕ್ರಮವನ್ನು ನಡೆಸಲಾಗುತ್ತಿದೆ. ಪ್ರಪಂಚದಾದ್ಯಂತ ಒಮಿಕ್ರಾನ್ ರೂಪಾಂತರದ 60,000 ಕ್ಕೂ ಹೆಚ್ಚು ದೃಢಪಡಿಸಿದ ಪ್ರಕರಣಗಳು ಪತ್ತೆಯಾಗಿವೆ ಮತ್ತು ಯುನೈಟೆಡ್ ಕಿಂಗ್‌ಡಮ್ ಆ ಪ್ರಕರಣಗಳಲ್ಲಿ ಶೇ. 50 ರಷ್ಟುನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com