ಲಸಿಕೆಯಲ್ಲಿನ ಮಾರ್ಪಾಡು ಹೊಸ ರೂಪಾಂತರಿಗಳನ್ನು ಎದುರಿಸಲು ಸಹಕಾರಿ: ಡಾ. ಗುಲೇರಿಯ
ಕೊರೋನಾದ ಹೊಸ ರೂಪಾಂತರಿಗಳನ್ನು ಎದುರಿಸುವುದಕ್ಕೆ ಮಾರ್ಪಾಡು ಮಾಡಲಾದ ಲಸಿಕೆಗಳು ಸಹಕಾರಿಯಾಗಬಹುದು ಎಂದು ದೆಹಲಿ ಏಮ್ಸ್ ನ ನಿರ್ದೇಶಕ ರಣ್ ದೀಪ್ ಗುಲೇರಿಯಾ ಹೇಳಿದ್ದಾರೆ.
Published: 20th December 2021 08:00 PM | Last Updated: 20th December 2021 08:05 PM | A+A A-

ಕೋವಿಡ್-19 ಲಸಿಕೆ
ನವದೆಹಲಿ: ಕೊರೋನಾದ ಹೊಸ ರೂಪಾಂತರಿಗಳನ್ನು ಎದುರಿಸುವುದಕ್ಕೆ ಮಾರ್ಪಾಡು ಮಾಡಲಾದ ಲಸಿಕೆಗಳು ಸಹಕಾರಿಯಾಗಬಹುದು ಎಂದು ದೆಹಲಿ ಏಮ್ಸ್ ನ ನಿರ್ದೇಶಕ ರಣ್ ದೀಪ್ ಗುಲೇರಿಯಾ ಹೇಳಿದ್ದಾರೆ.
ಕೊರೋನಾದ ಓಮಿಕ್ರಾನ್ ರೂಪಾಂತರಿ ಪ್ರಕರಣಗಳ ಏರಿಕೆಯ ನಡುವೆ ಮೂರನೇ ಡೋಸ್ ಲಸಿಕೆ ಕುರಿತು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಮ್ಸ್ ನಿರ್ದೇಶಕ ರಣ್ದೀಪ್ ಗುಲೇರಿಯಾ ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಓಮಿಕ್ರಾನ್ ನ ತೀವ್ರತೆಯ ವಿಷಯವಾಗಿ ಮುಂದಿನ ಕೆಲವು ವಾರಗಳು ಬಹಳ ಮುಖ್ಯವಾಗಿರಲಿದೆ ಎಂದು ಹೇಳಿದ್ದಾರೆ.
ಕೋವಿಡ್-19 ನ ಹೊಸ ರೂಪಾಂತರಿಯ ರೋಗದ ತೀವ್ರತೆ ಕಡಿಮೆ ಇದೆ ಎನ್ನುವುದು ಸಮಾಧಾನಕರ ಅಂಶವಾಗಿದ್ದು ಲಸಿಕೆಗಳಲ್ಲಿ ಮಾರ್ಪಾಡುಗಳು ಉಂಟಾಗಬಹುದು ಎಂದು ಡಾ. ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ನಾವು ಎರಡನೇ ಪೀಳಿಗೆ (ಸೆಕೆಂಡ್ ಜನರೇಷನ್ ಲಸಿಕೆ) ಗಳನ್ನು ಹೊಂದಲಿದ್ದೇವೆ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಈಗಿನ ಲಸಿಕೆಗಳು ಪರಿಣಾಮಕಾರಿಯಾಗಿವೆ. ಆದರೆ ಹೊಸ ರೂಪಾಂತರಿಗಳ ವಿರುದ್ಧ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು. ಆದಾಗ್ಯೂ ಲಸಿಕೆಗಳಲ್ಲಿ ಮಾರ್ಪಾಡು ಮಾಡಬಹುದು ಎಂದು ಗುಲೇರಿಯಾ ಮಾಹಿತಿ ನೀಡಿದ್ದಾರೆ.