ಸಂಸತ್ತಿನ ಚಳಿಗಾಲ ಅಧಿವೇಶನ: ಉಭಯ ಸದನಗಳ ಕಲಾಪ ನಿಗದಿತ ಸಮಯಕ್ಕೆ ಮೊದಲೇ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಚಳಿಗಾಲ ಅಧಿವೇಶನದ ಕಲಾಪ ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಪೂರ್ವ ನಿಗದಿಯಂತೆ ಈ ಬಾರಿಯ ಸಂಸತ್ತಿನ ಚಳಿಗಾಲ ಅಧಿವೇಶನ ನಾಳೆ ಮುಕ್ತಾಯವಾಗಬೇಕಿತ್ತು. ಅದಕ್ಕೆ ಒಂದು ದಿನ ಮೊದಲೇ ಲೋಕಸಭಾಧ್ಯಕ್ಷರು ಹಾಗೂ ರಾಜ್ಯಸಭೆಯಲ್ಲಿ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಸಂಸತ್ತು
ಸಂಸತ್ತು

ನವದೆಹಲಿ: ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಚಳಿಗಾಲ ಅಧಿವೇಶನದ ಕಲಾಪ ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಪೂರ್ವ ನಿಗದಿಯಂತೆ ಈ ಬಾರಿಯ ಸಂಸತ್ತಿನ ಚಳಿಗಾಲ ಅಧಿವೇಶನ ನಾಳೆ ಮುಕ್ತಾಯವಾಗಬೇಕಿತ್ತು. ಅದಕ್ಕೆ ಒಂದು ದಿನ ಮೊದಲೇ ಲೋಕಸಭಾಧ್ಯಕ್ಷರು ಹಾಗೂ ರಾಜ್ಯಸಭೆಯಲ್ಲಿ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ಕಳೆದ ನವೆಂಬರ್ 29ರಂದು ಚಳಿಗಾಲ ಅಧಿವೇಶನ ಆರಂಭವಾದಾಗಿನಿಂದ ಉಭಯ ಸದನಗಳಲ್ಲಿಯೂ ಫಲಪ್ರದ ಚರ್ಚೆ, ಕಲಾಪಗಳು ನಡೆಯುವುದಕ್ಕಿಂತ ವಿಪರೀತ ಗದ್ದಲ, ಕೋಲಾಹಲಗಳು ನಡೆದಿದ್ದೇ ಹೆಚ್ಚು. 12 ಮಂದಿ ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತು ಮಾಡಿದ್ದು, ಲಖಿಂಪುರ ಖೇರಿ ಘಟನೆ ಸೇರಿದಂತೆ ಅನೇಕ ವಿಷಯಗಳು ತೀವ್ರ ಕೋಲಾಹಲವೆಬ್ಬಿಸಿದವು. 

ಈ ಸಮಯದಲ್ಲಿ ಲೋಕಸಭೆಯಲ್ಲಿ ನಡೆದ ಒಟ್ಟು ಕಾರ್ಯಕಲಾಪ ಅವಧಿ, ಭಾಗವಹಿಸಿದ ಸದಸ್ಯರ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮಾಹಿತಿ ನೀಡಿದ್ದಾರೆ. ಲೋಕಸಭೆಯಲ್ಲಿ ಶೇಕಡಾ 82ರಷ್ಟು ಫಲಪ್ರದ ಮಾತುಕತೆ, ಚರ್ಚೆ ನಡೆದಿವೆ. 

ಲೋಕಸಭೆ: ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ 18 ದಿನಗಳ ಕಲಾಪ ನಡೆದಿತ್ತು. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆತ ಮತ್ತು ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯಂತಹ ಪ್ರಮುಖ ಶಾಸನಗಳ ಅಂಗೀಕಾರಕ್ಕೆ ಈ ಬಾರಿ ಸದನ ಕಲಾಪ ಸಾಕ್ಷಿಯಾಯಿತು. ಬೆಲೆ ಏರಿಕೆ ಮತ್ತು ಲಖಿಂಪುರ ಖೇರಿ ಹಿಂಸಾಚಾರದಂತಹ ಹಲವಾರು ವಿಷಯಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಅಡ್ಡಿಪಡಿಸಿದ್ದರಿಂದ ಅಧಿವೇಶನವು 18 ಗಂಟೆ 48 ನಿಮಿಷಗಳು ಉಪಯೋಗವಾಗದೆ ಹೋದವು. 

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಡಿಸೆಂಬರ್ 2 ರಂದು ಕೆಳಮನೆಯು ಶೇಕಡಾ 204 ರಷ್ಟು ದಾಖಲೆಯ ಚರ್ಚೆಯನ್ನು ಕಂಡಿದೆ. ಒಟ್ಟು 99 ಸಂಸದರು ಕೋವಿಡ್-19(Covid-19) ಕುರಿತು 12 ಗಂಟೆಗಳ 26 ನಿಮಿಷಗಳ ಸುದೀರ್ಘ ಚರ್ಚೆಯಲ್ಲಿ ಭಾಗವಹಿಸಿದರು, ಇದರಲ್ಲಿ ಅವರು COVID ಅವಧಿಯಲ್ಲಿ ತಮ್ಮ ಪ್ರದೇಶಗಳಲ್ಲಿ ಮಾಡಿದ ಅತ್ಯುತ್ತಮ ಕೆಲಸವನ್ನು ಸದನದೊಂದಿಗೆ ಹಂಚಿಕೊಂಡಿದ್ದಾರೆ ಎಂದು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಸದನ ಸದಸ್ಯರೊಂದಿಗೆ ಹಂಚಿಕೊಂಡರು. 

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಶೇಕಡಾ 82ರಷ್ಟು ಚರ್ಚೆ, ಫಲಪ್ರದ ಮಾತುಕತೆಗಳು ನಡೆದರೆ ರಾಜ್ಯಸಭೆಯಲ್ಲಿ ಶೇಕಡಾ 47ರಷ್ಟಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಇನ್ನು ರಾಜ್ಯಸಭೆಯಲ್ಲಿ ಆದ ಕಲಾಪಗಳ ಬಗ್ಗೆ ಸಭಾಪತಿ ಎಂ ವೆಂಕಯ್ಯ ನಾಯ್ಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಗದ್ದಲವಾಗಿದ್ದರಿಂದ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಮೇಲ್ಮನೆಯಲ್ಲಿ ಕಲಾಪ ನಡೆದಿದೆ, ಇದನ್ನು ಬಹಳ ಬೇಸರದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. 

ಈ ಅಧಿವೇಶನವು ವಿಭಿನ್ನವಾಗಿ ಮತ್ತು ಉತ್ತಮವಾಗಿರಬಹುದಾಗಿದ್ದರೆ ಯಾವ ರೀತಿ ತಾವು ವರ್ತಿಸಬೇಕಾಗಿತ್ತು ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಅಧಿವೇಶನದ ಹಾದಿಯ ಬಗ್ಗೆ ನಾನು ವಿಸ್ತೃತವಾಗಿ ಮಾತನಾಡಲು ಬಯಸುವುದಿಲ್ಲ, ಅದು ನನ್ನನ್ನು ಬಹಳ ವಿಮರ್ಶಾತ್ಮಕ ದೃಷ್ಟಿಕೋನಕ್ಕೆ ಕರೆದೊಯ್ಯುತ್ತದೆ ಎಂದರು.

ಸದನದಲ್ಲಿರುವಾಗ ಸದಸ್ಯರು ಕಾನೂನು, ನಿಬಂಧನೆಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಬೇಕು. ಪೂರ್ವ ನಿದರ್ಶನಗಳು, ಸಭ್ಯತೆ ಮತ್ತು ಸಜ್ಜನಿಕೆಗಳನ್ನು ಸದನದಲ್ಲಿ ಸದಸ್ಯರು ನಿರ್ವಹಿಸಬೇಕು. ಸದನದಲ್ಲಿ ಏನು ನಡೆಯಿತು ನಿಮ್ಮ ತಪ್ಪುಗಳ ಬಗ್ಗೆ ಅರಿವು ಮಾಡಿಕೊಳ್ಳಿ. ದೇಶದ ದೊಡ್ಡ ಹಿತಾಸಕ್ತಿಗಾಗಿ ನಾವೆಲ್ಲರೂ ರಚನಾತ್ಮಕ ಮತ್ತು ಸಕಾರಾತ್ಮಕ ವಾತಾವರಣದ ಕಡೆಗೆ ಕೆಲಸ ಮಾಡಬೇಕು ಎಂದು ಹೇಳಿದರು.

ಕೊನೆಗೆ ಸದನ ಸದಸ್ಯರಿಗೆ ಕ್ರಿಸ್ ಮಸ್, ಹೊಸ ವರ್ಷದ ಶುಭಾಶಯ ಹಾಗೂ ಮುಂದಿನ ತಿಂಗಳು ಬರುವ ಅತಿದೊಡ್ಡ ಹಬ್ಬ ಸಂಕರಾಂತಿ, ಪೊಂಗಲ್ ಗೆ ಶುಭಾಶಯ ಹೇಳುವುದನ್ನು ಸಭಾಪತಿ ವೆಂಕಯ್ಯ ನಾಯ್ಡು ಮರೆಯಲಿಲ್ಲ. 

ಕಳೆದ ಆಗಸ್ಟ್‌ನಲ್ಲಿ ನಡೆದ ಮಳೆಗಾಲ ಅಧಿವೇಶನದಲ್ಲಿ ತಮ್ಮ "ಅಶಿಸ್ತಿನ" ವರ್ತನೆಗಾಗಿ 12 ಸಂಸದರನ್ನು ಅಮಾನತುಗೊಳಿಸಿದ್ದಕ್ಕಾಗಿ ಅವರು ಭಿತ್ತಿಪತ್ರಗಳನ್ನು ಹಿಡಿದುಕೊಂಡು ಸದನದ ಬಾವಿಗೆ ಇಳಿದು ವಿರೋಧ ಪಕ್ಷಗಳ ಸದಸ್ಯರು ಹಲವಾರು ಬಾರಿ ಅಡ್ಡಿಪಡಿಸಿದ್ದರಿಂದ ಸದನ ತೀವ್ರ ಗದ್ದಲಕ್ಕೆ ಕಾರಣವಾಯಿತು, ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಮತ್ತು ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ವರದಿ ನೀಡಬೇಕೆಂದು ಕೇಳಿ ಪ್ರತಿಪಕ್ಷದ ಸದಸ್ಯರು ಪ್ರತಿಭಟಿಸಿದರು.

ಇಷ್ಟೆಲ್ಲಾ ಗದ್ದಲ,ಕೋಲಾಹಲಗಳ ಮಧ್ಯೆ ರಾಜ್ಯಸಭೆಯಲ್ಲಿ ಚುನಾವಣಾ ಸುಧಾರಣೆಗಳು ಮತ್ತು ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com