ಲುಧಿಯಾನ ಸ್ಫೋಟ ಪ್ರಕರಣ: ಮೃತಪಟ್ಟ ವ್ಯಕ್ತಿಯ ಗುರುತು ಎಸ್ಐಟಿಯಿಂದ ಪತ್ತೆ

ಲುಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ವಜಾಗೊಂಡಿದ್ದ ಪೊಲೀಸ್ ಪೇದೆ ಗಗನ್ ದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
ಲುಧಿಯಾನ ಕೋರ್ಟ್ ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ, ಘಟನಾ ಸ್ಥಳದಲ್ಲಿರುವ ಪೊಲೀಸ್ ಅಧಿಕಾರಿಗಳು
ಲುಧಿಯಾನ ಕೋರ್ಟ್ ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ, ಘಟನಾ ಸ್ಥಳದಲ್ಲಿರುವ ಪೊಲೀಸ್ ಅಧಿಕಾರಿಗಳು

ಚಂಡೀಗಢ: ಲುಧಿಯಾನ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ವಜಾಗೊಂಡಿದ್ದ ಪೊಲೀಸ್ ಪೇದೆ ಗಗನ್ ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. 

ಖನ್ನ ಪ್ರದೇಶದ ನಿವಾಸಿಯಾಗಿರುವ ಗಗನ್ ದೀಪ್ ಸಿಂಗ್ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. 2019 ರಲ್ಲಿ ಡ್ರಗ್ಸ್ ಸಂಬಂಧಿತ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರಿಂದ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೋರ್ಟ್ ಸಂಕೀರ್ಣದ ಎರಡನೇ ಮಹಡಿಯ ಶೌಚಾಲಯದಲ್ಲಿ ಸ್ಫೋಟದಲ್ಲಿ ಮೃತಪಟ್ಟ ಈ ಶಂಕಿತ ವ್ಯಕ್ತಿ, ಸ್ಫೋಟ ಸಾಧನವನ್ನು ಜೋಡಣೆ ಅಥವಾ ಇರಿಸಲು ಯತ್ನಿಸುತ್ತಿದ್ದ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಸಿಂಗ್ ಅವರ ಕುಟುಂಬ ಸದಸ್ಯರು ಆತನ ಮೃತದೇಹವನ್ನು ಗುರುತಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತ ವ್ಯಕ್ತಿಯ ಸಿಮ್ ಕಾರ್ಡ್ ನಿಂದ ಆತನ ಗುರುತು ಪತ್ತೆ ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಗುರುವಾರದಂದು ಕೋರ್ಟ್ ಸಂಕೀರ್ಣದಲ್ಲಿ ಸ್ಫೋಟ ಸಂಭವಿಸಿದ್ದು ಸಿಂಗ್ ಮೃತಪಟ್ಟಿದ್ದರು ಹಾಗೂ ಇನ್ನೂ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆ ಬೆನ್ನಲ್ಲೇ ಪಂಜಾಬ್ ಸರ್ಕಾರ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿತ್ತು. ಲುಧಿಯಾನದ ಪೊಲೀಸ್ ಆಯುಕ್ತ ಗುರ್ಪ್ರೀತ್ ಸಿಂಗ್ ಭುಲ್ಲರ್, ತನಿಖೆಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ದೊರೆತಿದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com