
ನಕ್ಸಲ್ ಎನ್ ಕೌಂಟರ್
ನವದೆಹಲಿ: ತೆಲಂಗಾಣ-ಛತ್ತೀಸ್ ಗಢ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಮಂದಿ ನಕ್ಸಲರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಮುಂಜಾನೆ ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಪೆಸಲಪಾಡು ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ ಆರು ಮಾವೋವಾದಿಗಳು ಹತರಾಗಿದ್ದಾರೆ.
ಘಟನಾ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದ್ದು, ಎನ್ ಕೌಂಟರ್ ಮುಂದುವರೆದಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೊಥಗುಡೆಂ ಜಿಲ್ಲೆಯ ಎಸ್‌ಪಿ ಸುನಿಲ್ ದತ್ ಅವರು, ಇದು ತೆಲಂಗಾಣ ಪೊಲೀಸರು, ಛತ್ತೀಸ್‌ಗಢ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ಜಂಟಿ ಕಾರ್ಯಾಚರಣೆಯಾಗಿದೆ. ತೆಲಂಗಾಣ ಮತ್ತು ಛತ್ತೀಸ್‌ಗಢದ ಗಡಿ ಪ್ರದೇಶದ ಕಿಸ್ತಾರಾಮ್ ಪಿಎಸ್ ಮಿತಿಯ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಹತರಾಗಿದ್ದಾರೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಪೊಲೀಸರು ವಶಪಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಐಇಡಿ ಬಾಂಬ್ ಗಳನ್ನು ನೆಡಲಾಗಿದೆ. ಮೂಲ ಪ್ರಕಾರ, ನಕ್ಸಲರು ಅಬುಜ್ಮದ್ ಮತ್ತು ಬಸ್ತಾರ್ ಪ್ರದೇಶಗಳಲ್ಲಿ ಸ್ಥಳೀಯರ ಬೆಂಬಲವನ್ನು ಕಳೆದುಕೊಳ್ಳುತ್ತಿರುವುದರಿಂದ ಜಿಲ್ಲೆಯ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಐಇಡಿ ಬಾಂಬ್ ಗಳನ್ನು ನೆಡುತ್ತಿದ್ದಾರೆ ಎನ್ನಲಾಗಿದೆ.