ಲುಧಿಯಾನ ಸ್ಫೋಟ ಪ್ರಕರಣದ ಆರೋಪಿಯ ವಿಚಾರಣೆ: ಜರ್ಮನಿಗೆ ತೆರಳಲು ಎನ್ಐಎ ಮುಂದು
ಲುಧಿಯಾನ ಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಜರ್ಮನಿಗೆ ತೆರಳಿ ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ಸದಸ್ಯ ಜಸ್ವಿಂದರ್ ಸಿಂಗ್ ಮುಲ್ತಾನಿಯನ್ನು ವಿಚಾರಣೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
Published: 31st December 2021 01:32 PM | Last Updated: 31st December 2021 01:32 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಲುಧಿಯಾನ ಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಜರ್ಮನಿಗೆ ತೆರಳಿ ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ಸದಸ್ಯ ಜಸ್ವಿಂದರ್ ಸಿಂಗ್ ಮುಲ್ತಾನಿಯನ್ನು ವಿಚಾರಣೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
ಮುಲ್ತಾನಿಯನ್ನು ಭಾರತಕ್ಕೆ ಕರೆತರುವ ಪ್ರಯತ್ನವನ್ನು ಎನ್ಐಎ ಪ್ರಾರಂಭಿಸಲಿದೆ. ಆದರೆ, ಅದಕ್ಕೂ ಮುನ್ನ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಮತ್ತು ಇತರ ಭಾರತೀಯ ದಂಡ ಸಂಹಿತೆಯ ವಿಭಾಗಗಳ ಅಡಿಯಲ್ಲಿ ಮುಲ್ತಾನಿ ಮತ್ತು ಇತರರ ವಿರುದ್ಧ ಪ್ರಕರಣವನ್ನು ದಾಖಲಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಖಲಿಸ್ತಾನ್ ಬೆಂಬಲಿಗರು ಪಂಜಾಬ್‌ನಲ್ಲಿ ಯುವಕರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರ ಕಾರ್ಯಸೂಚಿ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮದ ವೇದಿಕೆಗಳನ್ನು ಬಳಕೆ ಮಾಡುತ್ತಿದ್ದಾರೆ. ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಅವರ ಚಟುವಟಿಕೆಗಳು ಉಲ್ಬಣಗೊಂಡಿವೆ ಎಂದು ತಿಳಿಸಿದ್ದಾರೆ.
ಮುಲ್ತಾನಿಯನ್ನು ಜರ್ಮನ್ ಪೊಲೀಸರು ಬಂಧನಕ್ಕೊಳಪಡಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಈ ಡುವೆ ಲುಧಿಯಾನ ಸ್ಫೋಟ ಪ್ರಕರಣದಲ್ಲಿ ಮುಲ್ತಾನಿ ಭಾಗಿಯಾಗಿರುವ ಬಗ್ಗೆ ಬಲವಾದ ಸಾಕ್ಷ್ಯಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಮಾಹಿತಿಗಾಗಿ ಆರೋಪಿಯನ್ನು ವಿಚಾರಣೆಗೊಳಪಡಿಸಲು ಎನ್‌ಐಎ ತಂಡ ಜರ್ಮನಿಗೆ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 23 ರಂದು ಲುಧಿಯಾನ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಅಲ್ಲದೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.