ಸಿಂಘು ಗಡಿಯಲ್ಲಿ ಬಂಧಿಸಲ್ಪಟ್ಟ ಪತ್ರಕರ್ತನನ್ನು ತಕ್ಷಣ ಬಿಡುಗಡೆ ಮಾಡುವಂತೆ ಎಡಿಟರ್ಸ್ ಗಿಲ್ಡ್ ಆಗ್ರಹ
ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದ ಸ್ವತಂತ್ರ ಪತ್ರಕರ್ತ ಮಂದೀಪ್ ಪುನಿಯಾ ಅವರನ್ನು ಬಂಧಿಸಿರುವ ಬಗ್ಗೆ ಸಂಪಾದಕರ ಸಂಘ
Published: 02nd February 2021 12:29 AM | Last Updated: 02nd February 2021 12:29 AM | A+A A-

ಮಂದೀಪ್ ಪುನಿಯಾ
ನವದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದ ಸ್ವತಂತ್ರ ಪತ್ರಕರ್ತ ಮಂದೀಪ್ ಪುನಿಯಾ ಅವರನ್ನು ಬಂಧಿಸಿರುವ ಬಗ್ಗೆ ಸಂಪಾದಕರ ಸಂಘ(ಎಡಿಟರ್ಸ್ ಗಿಲ್ಡ್) ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದು ಸ್ವತಂತ್ರ ಲೇಖಕರ ಧೈರ್ಯಶಾಲಿ ಧ್ವನಿಯನ್ನು ಅಡಗಿಸುವ ಪ್ರಯತ್ನ ಎಂದು ಹೇಳಿದೆ.
ಪುನಿಯಾ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಎಡಿಟರ್ಸ್ ಗಿಲ್ಡ್ ಆಗ್ರಹಿಸುತ್ತದೆ ಮತ್ತು ದೆಹಲಿ ಪೊಲೀಸರು ಪತ್ರಕರ್ತರು ನಿರ್ಭವಾಗಿ ವರದಿ ಮಾಡುವಂತಹ ವಾತಾವರಣ ಸೃಷ್ಟಿಸಬೇಕು ಎಂದು ಸಂಪಾದಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಪ್ರತಿಭಟಿಸುತ್ತಿರುವ ಸಿಂಘು ಗಡಿಯಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ಆರೋಪದ ಮೇಲೆ ಪುನಿಯಾ ಮತ್ತು ಧರ್ಮೇಂದರ್ ಸಿಂಗ್(ಆನ್ಲೈನ್ ನ್ಯೂಸ್ ಇಂಡಿಯಾ) ಅವರನ್ನು ಶನಿವಾರ ಸಂಜೆ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ ಭಾನುವಾರ ಪುನಿಯಾ ಅವರನ್ನು ಬಂಧಿಸಲಾಗಿದೆ.