ಸಂಸತ್ತಿನ ಒಳಗೆ, ಹೊರಗೆ ರೈತರ ಸಮಸ್ಯೆಗಳ ಕುರಿತು ಚರ್ಚೆಗೆ ಸರ್ಕಾರ ಸಿದ್ಧ: ಕೇಂದ್ರ ಸಚಿವ ತೋಮರ್
ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಪಕ್ಷದ ತೀವ್ರ ಪ್ರತಿಭಟನೆಯ ಮಧ್ಯೆ, ಸಂಸತ್ತಿನ ಒಳಗೆ ಮತ್ತು ಹೊರಗೆ ರೈತರಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಸರ್ಕಾರ ಸಿದ್ಧ ಎಂದು ಕೇಂದ್ರ ಕೃಷಿ ಸಚಿವ
Published: 02nd February 2021 07:38 PM | Last Updated: 02nd February 2021 07:38 PM | A+A A-

ನರೇಂದ್ರ ಸಿಂಗ್ ತೋಮರ್
ನವದೆಹಲಿ: ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಪಕ್ಷದ ತೀವ್ರ ಪ್ರತಿಭಟನೆಯ ಮಧ್ಯೆ, ಸಂಸತ್ತಿನ ಒಳಗೆ ಮತ್ತು ಹೊರಗೆ ರೈತರಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಸರ್ಕಾರ ಸಿದ್ಧ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಪಕ್ಷ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ಪ್ರತಿಪಕ್ಷಗಳ ಕೋಲಾಹಲದಿಂದಾಗಿ ಸದನವನ್ನು ಎರಡು ಬಾರಿ ಮುಂದೂಡಲಾಯಿತು.
ಸಂಜೆ ಐದು ಗಂಟೆಗೆ ಕಲಾಪ ಮತ್ತೆ ಆರಂಭವಾದಾಗ, ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಮೋದಿ ಸರ್ಕಾರ ಸದಾ ಸಿದ್ಧವಾಗಿದೆ ಎಂದು ತೋಮರ್ ಹೇಳಿದರು.
"ಸಂಸತ್ತಿನ ಒಳಗೆ ಮತ್ತು ಹೊರಗೆ ರೈತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ" ಎಂದು ಕೇಂದ್ರ ಸಚಿವ ತೋಮರ್ ಅವರು ವಿರೋಧ ಪಕ್ಷಗಳ ಘೋಷಣೆಗಳ ನಡುವೆಯೇ ಹೇಳಿದರು.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ 170 ರೈತರು ಸಾವನ್ನಪ್ಪಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದ ನಂತರ ತೋಮರ್ ಅವರು ಈ ಉತ್ತರ ನೀಡಿದ್ದಾರೆ.
ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪರಿಸ್ಥಿತಿ ಬ್ರಿಟಿಷ್ ಆಡಳಿತಕ್ಕೆ ಹೋಲುತ್ತದೆ ಎಂದು ಚೌಧರಿ ಆರೋಪಿಸಿದರು.
ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ಮನವಿ ಮಾಡಿದರೂ ಕೇಳದಿದ್ದಾಗ ಕಲಾಪವನ್ನು ಎರಡು ಬಾರಿ ಮುಂದೂಡಿದರು.