ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ: ಗಾಜಿಪುರ್ ಗಡಿಯತ್ತ ಹೊರಟಿದ್ದ ವಿರೋಧ ಪಕ್ಷಗಳ 15 ಸಂಸದರಿಗೆ ದೆಹಲಿ ಪೊಲೀಸರ ತಡೆ
ದೆಹಲಿಯ ಗಾಜಿಪುರ್ ಗಡಿಭಾಗ ತಲುಪಲು ಗುರುವಾರ ಬೆಳಗ್ಗೆ ಹೊರಟಿದ್ದ ಡಿಎಂಕೆ, ಶಿರೋಮಣಿ ಅಕಾಲಿ ದಳ, ಎನ್ ಸಿಪಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ 10 ವಿರೋಧ ಪಕ್ಷಗಳ 15 ಸಂಸದರನ್ನು ಪೊಲೀಸರು ತಡೆದ ಪ್ರಸಂಗ ನಡೆದಿದೆ.
Published: 04th February 2021 12:19 PM | Last Updated: 04th February 2021 01:41 PM | A+A A-

ವಿರೋಧ ಪಕ್ಷದ ಸಂಸದರನ್ನು ದೆಹಲಿ ಗಡಿಭಾಗದ ಹತ್ತಿರ ತಡೆದ ಪೊಲೀಸರು ಮತ್ತು ಗಾಜಿಪುರ್ ಗಡಿಭಾಗದಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ
ನವದೆಹಲಿ: ದೆಹಲಿಯ ಗಾಜಿಪುರ್ ಗಡಿಭಾಗ ತಲುಪಲು ಗುರುವಾರ ಬೆಳಗ್ಗೆ ಹೊರಟಿದ್ದ ಡಿಎಂಕೆ, ಶಿರೋಮಣಿ ಅಕಾಲಿ ದಳ, ಎನ್ ಸಿಪಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ 10 ವಿರೋಧ ಪಕ್ಷಗಳ 15 ಸಂಸದರನ್ನು ಪೊಲೀಸರು ತಡೆದ ಪ್ರಸಂಗ ನಡೆದಿದೆ.
ಎನ್ ಡಿಎ ಮೈತ್ರಿಕೂಟದ ಭಾಗವಾಗಿ ಸಚಿವೆಯಾಗಿದ್ದ ಶಿರೋಮಣಿ ಅಕಾಲಿ ದಳ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಸಹ ಇಂದು ಗಾಜಿಪುರದಲ್ಲಿ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ಹೊರಟಿದ್ದರು. ಆದರೆ ಪೊಲೀಸರು ಅವರನ್ನು ಬ್ಯಾರಿಕೇಡ್ ದಾಟಿ ಹೋಗಲು ಬಿಡಲಿಲ್ಲ. ಬಾದಲ್ ಅವರ ಜೊತೆಗೆ ಎನ್ ಸಿಪಿಯ ಸುಪ್ರಿಯಾ ಸುಳೆ, ಡಿಎಂಕೆಯಿಂದ ಕನ್ನಿಮೋಳಿ, ತಿರುಚಿ ಶಿವಾ, ಟಿಎಂಸಿಯ ಸೌಗತ ರಾಯ್ ಕೂಡ ಇದ್ದರು.
ನ್ಯಾಷನಲ್ ಕಾನ್ಫರೆನ್ಸ್, ಆರ್ ಎಸ್ ಪಿ ಮತ್ತು ಐಯುಎಂಎಲ್ ನ ಸದಸ್ಯರು ಕೂಡ ನಿಯೋಗದಲ್ಲಿದ್ದರು. ನಿನ್ನೆ ಸಂಸತ್ತಿನಲ್ಲಿ ಪ್ರತಿಭಟನೆ ಬಗ್ಗೆ ನಡೆದ ಚರ್ಚೆ ವೇಳೆ ಹಲವು ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು. ಪ್ರತಿಭಟನಾ ನಿರತ ರೈತರನ್ನು ಶತ್ರುಗಳಂತೆ ಕಾಣಬೇಡಿ ಎಂದು ಕೂಡ ಒತ್ತಾಯಿಸಿದರು.
ಇಂದು ದೆಹಲಿ-ಉತ್ತರ ಪ್ರದೇಶ ಗಡಿ ಭಾಗ ಗಾಜಿಪುರ್ ನಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಇದು ಪ್ರಮುಖ ಪ್ರತಿಭಟನಾ ಸ್ಥಳವಾಗಿದ್ದು ಸಾವಿರಾರು ಮಂದಿ ರೈತರು ಎರಡು ತಿಂಗಳಿನಿಂದ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಈ ಮಧ್ಯೆ, ಗಾಜಿಪುರ್ ಗಡಿಭಾಗದಲ್ಲಿ ಬ್ಯಾರಿಕೇಡ್ ಗಳ ಹತ್ತಿರ ಜೋಡಿಸಲಾದ ಮೊಳೆಗಳನ್ನು ಮರುಹೊಂದಿಸಲಾಗಿದ್ದು ಭದ್ರತಾ ವ್ಯವಸ್ಥೆ ನಿನ್ನೆಯಂತೇ ಮುಂದುವರಿದಿದೆ. ಗಾಜಿಪುರದಲ್ಲಿ ಮೊಳೆಗಳನ್ನು ತೆಗೆಯಲಾಗಿದೆ ಎಂಬ ವಿಡಿಯೊಗಳು, ಫೋಟೋಗಳು ಹರಿದಾಡುತ್ತಿದೆ. ಅವುಗಳನ್ನು ಮರುಜೋಡಿಸಲಾಗಿದೆಯಷ್ಟೆ, ಗಡಿಯಲ್ಲಿನ ಭದ್ರತಾ ವ್ಯವಸ್ಥೆ ನಿಯೋಜನೆ ಹಿಂದಿನಂತೆಯೇ ಮುಂದುವರಿದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
#WATCH | Nails that were fixed near barricades at Ghazipur border (Delhi-UP border) are being removed. pic.twitter.com/YWCQxxyNsH
— ANI (@ANI) February 4, 2021
ದೆಹಲಿ ಪೊಲೀಸರು ಇತ್ತೀಚೆಗೆ ಬ್ಯಾರಿಕೇಡ್ ಹತ್ತಿರ ಗಾಜಿಪುರ್ ಮತ್ತು ಟಿಕ್ರಿ ಗಡಿಭಾಗಗಳಲ್ಲಿ ಮೊಳೆಗಳನ್ನು ಜೋಡಿಸಿದ್ದರು. ಅಲ್ಲದೆ ಗಾಜಿಪುರ್ ಗಡಿಭಾಗದಲ್ಲಿ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ರೈತರ ಸಂಚಾರವನ್ನು ನಿರ್ಬಂಧಿಸಲು ಮುಳ್ಳುತಂತಿ ಮತ್ತು ಸಿಮೆಂಟ್ ಬ್ಯಾರಿಕೇಡ್ಗಳನ್ನು ರಸ್ತೆಗಳಲ್ಲಿ ನೆಡಲಾಗಿದೆ.