ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೊ ಬೈಡನ್ ಮಾತುಕತೆ: ಶಾಂತಿ, ಭದ್ರತೆ, ಭಯೋತ್ಪಾದನೆ ನಿಗ್ರಹ, ಕೋವಿಡ್-19 ಕುರಿತು ಚರ್ಚೆ 

ಅಮೆರಿಕದ ನೂತನ ಅಧ್ಯಕ್ಷ ಜೊ ಬೈಡನ್ ಜೊತೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

Published: 09th February 2021 08:16 AM  |   Last Updated: 09th February 2021 12:19 PM   |  A+A-


Joe Biden-PM Narendra Modi

ಜೊ ಬೈಡನ್-ಪ್ರಧಾನಿ ಮೋದಿ

Posted By : Sumana Upadhyaya
Source : PTI

ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷ ಜೊ ಬೈಡನ್ ಜೊತೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ನಿಯಮ ಆಧಾರಿತ ಆದೇಶಗಳ ಬಗ್ಗೆ ಉಭಯ ನಾಯಕರು ತಮ್ಮ ಬದ್ಧತೆ ತೋರಿಸಿದ್ದು ದ್ವಿಪಕ್ಷೀಯ ಕಾರ್ಯತಂತ್ರ ಸಹಭಾಗಿತ್ವ, ಇಂಡೊ-ಫೆಸಿಫಿಕ್ ಪ್ರದೇಶ ಸೇರಿದಂತೆ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದರ ಕುರಿತು ಒಲವು ತೋರಿಸಿದ್ದಾರೆ.

ಕಳೆದ ಜನವರಿ 20ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಜೊ ಬೈಡನ್ ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ನಡೆಸುತ್ತಿರುವ ಮೊದಲ ಮಾತುಕತೆ ಇದಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಅಮೆರಿಕದ ನೂತನ ಅಧ್ಯಕ್ಷರಿಗೆ ಅಭಿನಂದನೆ ತಿಳಿಸಿದ್ದು, ಸ್ಥಳೀಯ ವಿಷಯಗಳು ಮತ್ತು ಹಂಚಿಕೆಯ ಆದ್ಯತೆ ವಿಷಯಗಳ ಕುರಿತು ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ.

ಹವಾಮಾನ ಬದಲಾವಣೆ ಕುರಿತು ಹೆಚ್ಚಿನ ಸಹಕಾರಕ್ಕೆ ಕೂಡ ಉಭಯ ದೇಶಗಳು ಒಪ್ಪಿಕೊಂಡಿವೆ. ಈ ಹಿಂದೆ ಕಳೆದ ನವೆಂಬರ್ ನಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಗೆದ್ದ ಜೊ ಬೈಡನ್ ಅವರೊಂದಿಗೆ ಅಧಿಕಾರ ವಹಿಸಿಕೊಳ್ಳುವ ಮೊದಲು ಪ್ರಧಾನಿ ಮೋದಿ ಸಂವಹನ ನಡೆಸಿದ್ದರು. ಆ ಸಂದರ್ಭದಲ್ಲಿ ಕೋವಿಡ್-19 ಸಾಂಕ್ರಾಮಿಕ, ಹವಾಮಾನ ಬದಲಾವಣೆ, ಇಂಡೊ-ಫೆಸಿಫಿಕ್ ಪ್ರದೇಶದಲ್ಲಿ ಸಹಕಾರ, ಕಾರ್ಯಾತ್ಮಕ ದ್ವಿಪಕ್ಷೀಯ ಸಹಕಾರ ವೃದ್ಧಿಗೆ ದೃಢ ಬದ್ಧತೆಯನ್ನು ಉಭಯ ನಾಯಕರು ಪ್ರತಿಪಾದಿಸಿದ್ದರು.

ಜೊ ಬೈಡನ್ ಹೇಳಿದ್ದೇನು?: ಕೋವಿಡ್-19 ಸಾಂಕ್ರಾಮಿಕವನ್ನು ತಗ್ಗಿಸಲು, ಭಯೋತ್ಪಾದನೆಯನ್ನು ಹತ್ತಿಕ್ಕಲು ಅಮೆರಿಕ-ಭಾರತ ಸಹಕಾರವನ್ನು ಜೊ ಬೈಡನ್ ನಿನ್ನೆ ಪ್ರಧಾನಿ ಮೋದಿ ಜೊತೆ ಮಾತನಾಡುವ ವೇಳೆ ಮರು ದೃಢಪಡಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು, ಹವಾಮಾನ ಬದಲಾವಣೆಯ ಬಗ್ಗೆ ತಮ್ಮ ಪಾಲುದಾರಿಕೆಯನ್ನು ನವೀಕರಿಸಲು, ಜಾಗತಿಕ ಆರ್ಥಿಕತೆಯನ್ನು ಎರಡೂ ದೇಶಗಳ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಪುನರ್ನಿರ್ಮಿಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಜೊ ಬೈಡನ್ ಹೇಳಿರುವುದಾಗಿ ಶ್ವೇತಭವನ ತಿಳಿಸಿದೆ.

ಉಭಯ ನಾಯಕರು ಮುಕ್ತ ಇಂಡೋ-ಪೆಸಿಫಿಕ್ ಅನ್ನು ಉತ್ತೇಜಿಸಲು ನಿಕಟ ಸಹಕಾರವನ್ನು ಮುಂದುವರಿಸಲು ಒಪ್ಪಿಕೊಂಡರು, ಇದರಲ್ಲಿ ನೌಕಾಪಡೆ ಸ್ವಾತಂತ್ರ್ಯ, ಪ್ರಾದೇಶಿಕ ಸಮಗ್ರತೆ ಮತ್ತು ಕ್ವಾಡ್ ಮೂಲಕ ಬಲವಾದ ಪ್ರಾದೇಶಿಕ ಸಂಬಂಧ ನಿರ್ಮಾಣ ಕೂಡ ಸೇರಿದೆ.

ವಿಶ್ವಾದ್ಯಂತ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ನಿಯಮಗಳನ್ನು ರಕ್ಷಿಸುವ ಬಯಕೆಯನ್ನು ಅಮೆರಿಕ ಅಧ್ಯಕ್ಷರು ಒತ್ತಿಹೇಳಿದ್ದಾರೆ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಹಂಚಿಕೆಯ ಬದ್ಧತೆಯು ಯುಎಸ್-ಇಂಡಿಯಾ ಸಂಬಂಧದ ತಳಹದಿಯಾಗಿದೆ ಮತ್ತು ಮಯನ್ಮಾರ್ ನಲ್ಲಿ ಕಾನೂನಿನ ನಿಯಮ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಎತ್ತಿಹಿಡಿಯಬೇಕು ಎಂದು ಜೊ ಬೈಡನ್ ಬಯಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp