ಲೋಕಸಭೆಯಲ್ಲಿ ಟಿಎಂಸಿ ಹೇಳಿಕೆ ವಿವಾದ: ಸೂಕ್ತ ಕ್ರಮ ಕೈಗೊಳ್ಳುತ್ತೇವೆ- ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ
ರಾಮ ಮಂದಿರ ತೀರ್ಪು ಮತ್ತು ಹಿಂದಿನ ಮುಖ್ಯ ನ್ಯಾಯಮೂರ್ತಿಗಳನ್ನು ತಂದು ವಿವಾದ ಸೃಷ್ಟಿಸಲು ನೋಡುವುದು ಗಂಭೀರ ವಿಷಯವಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಿದ್ದೇವ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
Published: 09th February 2021 10:36 AM | Last Updated: 09th February 2021 12:46 PM | A+A A-

ಪ್ರಹ್ಲಾದ್ ಜೋಷಿ
ನವದೆಹಲಿ: ರಾಮ ಮಂದಿರ ತೀರ್ಪು ಮತ್ತು ಹಿಂದಿನ ಮುಖ್ಯ ನ್ಯಾಯಮೂರ್ತಿಗಳನ್ನು ತಂದು ವಿವಾದ ಸೃಷ್ಟಿಸಲು ನೋಡುವುದು ಗಂಭೀರ ವಿಷಯವಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಿದ್ದೇವ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಇಂದು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಮ ಮಂದಿರ ತೀರ್ಪನ್ನು ಸದನದಲ್ಲಿ ಪ್ರಸ್ತಾಪಿಸಿ ಅಂದಿನ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ ಎಂದು ಟಿಎಂಸಿ ಸಂಸದೆ ಮಾಹುವಾ ಮೊಯಿತ್ರಾ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ತೀವ್ರ ಕೋಲಾಹಲ: ದೇಶದ ಮಾಜಿ ಮುಖ್ಯ ನ್ಯಾಯಾಧೀಶರ ಹೆಸರನ್ನು ಟಿಎಂಸಿ ಸಂಸದೆ ಮಾಹುವಾ ಮೊಯಿತ್ರಾ ಉಲ್ಲೇಖ ಮಾಡಿದ್ದಕ್ಕೆ ನಿನ್ನೆ ಲೋಕಸಭೆಯಲ್ಲಿ ತೀವ್ರ ಗದ್ದಲ, ಕೋಲಾಹಲ ಉಂಟಾಯಿತು. ಸಂಸದೀಯ ನಿಯಮಗಳನ್ನು ಸಂಸದೆ ಉಲ್ಲಂಘಿಸಿದ್ದು, ಅವರ ಟೀಕೆಗಳನ್ನು ಕಡತದಿಂದ ಹೊರಹಾಕಬೇಕೆಂದು ಆಡಳಿತ ಪಕ್ಷದ ಸದಸ್ಯರು ಸಭಾಧ್ಯಕ್ಷರನ್ನು ಒತ್ತಾಯಿಸಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಸಂಸದೆ ಮಾತನಾಡಿ, ಸರ್ಕಾರದ ವಿರುದ್ಧ ಕಿಡಿಕಾರಿದರು. ನ್ಯಾಯಾಂಗ ಮತ್ತು ಮಾಧ್ಯಮಗಳು ಸಹ ಸತ್ಯವನ್ನು, ನ್ಯಾಯವನ್ನು ತೋರಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ಭಾರತ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ತಲೆದೋರಿದ್ದು, ವಿದ್ಯಾರ್ಥಿಗಳಿಂದ ಹಿಡಿಗು ರೈತರವರೆ, ವೃದ್ಧೆಯರಿಂದ ಹಿಡಿದು ಶಹೀನ್ ಭಾಗ್ ವರೆಗೆ ಎಲ್ಲರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ. ಸಿಎಎ ನಿಯಮಗಳನ್ನು ರಚಿಸಲು ಗಡುವನ್ನು ಸರ್ಕಾರ ಮುಂದೂಡುತ್ತಿದೆ ಏಕೆ ಎಂದು ಪ್ರಶ್ನಿಸಿದರು.
ಸರ್ಕಾರವನ್ನು ಟೀಕಿಸುವ ಭರದಲ್ಲಿ ಹೇಡಿಗಳು ಎಂದು ಪದೇ ಪದೇ ಉಲ್ಲೇಖಿಸಿದ್ದ ಸಂಸದೆ ಅಧಿಕಾರದ ಹಿಂದೆ ಅಡಗಿ ಕುಳಿತಿರುವ ಸರ್ಕಾರ ಸರ್ಕಾರದ ವಿರುದ್ಧ ಟೀಕಿಸುವವರನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಿದೆ ಎಂದು ಆರೋಪಿಸಿದ್ದರು.
ಇವರ ಮಾತಿಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.