ಭಾರತೀಯ ಆ್ಯಪ್‌ ಗೆ ಚೀನಾ ಹೂಡಿಕೆ, ಡಾಟಾ ಸೋರಿಕೆಯ ಪ್ರಶ್ನೆಗಳ 'ಕೂ'ಗು: ಸಂಸ್ಥಾಪಕರ ಉತ್ತರ ಹೀಗಿದೆ...

ರೈತರ ಪ್ರತಿಭಟನೆ ಪ್ರಹಸನದ ನಂತರ ಟ್ವಿಟರ್ ಭಾರತದ ಕಾನೂನುಗಳಿಗೆ ಬದ್ಧವಾಗಿರದೇ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ದೇಶೀಯ ಸಾಮಾಜಿಕ ಜಾಲತಾಣ, ಬೆಂಗಳೂರು ಮೂಲದ ಆ್ಯಪ್‌ 'ಕೂ' ಜನಪ್ರಿಯತೆ ಹೆಚ್ಚುವುದಕ್ಕೆ ಕಾರಣವಾಗಿದೆ. 

Published: 11th February 2021 07:01 PM  |   Last Updated: 11th February 2021 07:05 PM   |  A+A-


Koo

'ಕೂ' ಆ್ಯಪ್‌

Posted By : Srinivas Rao BV
Source : The New Indian Express

ಬೆಂಗಳೂರು: ರೈತರ ಪ್ರತಿಭಟನೆ ಪ್ರಹಸನದ ನಂತರ ಟ್ವಿಟರ್ ಭಾರತದ ಕಾನೂನುಗಳಿಗೆ ಬದ್ಧವಾಗಿರದೇ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ದೇಶೀಯ ಸಾಮಾಜಿಕ ಜಾಲತಾಣ, ಬೆಂಗಳೂರು ಮೂಲದ ಆ್ಯಪ್‌ 'ಕೂ' ಜನಪ್ರಿಯತೆ ಹೆಚ್ಚುವುದಕ್ಕೆ ಕಾರಣವಾಗಿದೆ. 

ಸರ್ಕಾರ ಟ್ವಿಟರ್ ಗೆ ಪರ್ಯಾಯವಾಗಿ 'ಕೂ' ಉತ್ತೇಜನಕ್ಕೇನೋ ಮುಂದಾಗಿದೆ. ಆದರೆ ಈಗ ಚೀನಾದ ಹೂಡಿಕೆ ಹೆಚ್ಚಿನ ಪ್ರಮಾಣದಲ್ಲಿ ಕಣ್ಣಿಗೆ ರಾಚುತ್ತಿದ್ದು, ಈ ಕುರಿತ ಪ್ರಶ್ನೆಗಳು 'ಕೂ' ಆ್ಯಪ್‌ ಗೂ ಸಹಜವಾಗಿ ಎದುರಾಗಿದೆ. 

ಹೊಸ ಸಾಮಾಜಿಕ ಜಾಲತಾಣ 'ಕೂ' ಗೆ ಜನಪ್ರಿಯತೆಯೇನೋ ಉತ್ತಮವಾಗಿ ದೊರೆಯುತ್ತಿದೆ. ಈ ನಡುವೆ ಚೀನಾದ ಹೂಡಿಕೆಯ ವಿಷಯದ ಜೊತೆಗೆ ಸಾರ್ವಜನಿಕರಿಗೆ ಪ್ರತಿ ಜಾಲತಾಣಗಳ ಬಗ್ಗೆ ಇರುವಂತೆ ವೈಯಕ್ತಿಕ ಮಾಹಿತಿಯ ಡಾಟಾ ಸೋರಿಕೆಯ ಆತಂಕವೂ ಕಾಡುತ್ತಿದೆ. 

ಮೊದಲಿಗೆ ಚೀನಾ ಹೂಡಿಕೆಯ ವಿಷಯವನ್ನು ನೋಡುವುದಾದರೆ, ಪ್ರಾರಂಭದಲ್ಲಿ ಚೀನಾದ ವೆಂಚರ್ ಕ್ಯಾಪಿಟಲ್ ಸಂಸ್ಥೆಯಾಗಿರುವ, ಲೀ  ಶುನ್ವೇ ಕ್ಯಾಪಿಟಲ್ 'ಕೂ' ಆ್ಯಪ್‌ ನಲ್ಲಿ ಒಂದಷ್ಟು ಹೂಡಿಕೆ ಮಾಡಿದ್ದು ಬಹಿರಂಗವಾಗಿದೆ. ಭಾರತದಲ್ಲಿ ಶೇ.23 ರಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿರುವ ಶಿಯೋಮಿ ಬ್ರಾಂಡ್ ನ ಸಿಇಒ ಜುನ್ ಲೀ ಶುನ್ವೆ ಕ್ಯಾಪಿಟಲ್ ನ ಸಂಸ್ಥಾಪಕ ಪಾಲುದಾರರಾಗಿದ್ದಾರೆ ಎಂಬುದು ಗಮನಾರ್ಹ ಅಂಶ. 

ಶುನ್ವೆ ಕ್ಯಾಪಿಟಲ್ ಹಾಗೂ ಶಿಯೋಮಿ 'ಕೂ' ನಲ್ಲಿ ಅಷ್ಟೇ ಅಲ್ಲದೇ ಜೊಮ್ಯಾಟೋ ಸೇರಿದಂತೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸಂಸ್ಥೆಗಳಲ್ಲಿ ಹೂಡಿಕೆ ಹೊಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ 'ಕೂ' ಸಿಇಒ ಹಾಗೂ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಶುನ್ವೆ ಕ್ಯಾಪಿಟಲ್ 'ಕೂ' ಸಂಸ್ಥೆಯಿಂದ ಸಂಪೂರ್ಣವಾಗಿ ಹೊರನಡೆಯುವ ಪ್ರಕ್ರಿಯೆಯಲ್ಲಿದ್ದು, ಈಗ ಅದರ ಪಾಲುದಾರಿಕೆ ಒಂದಂಕಿ ಶೇಕಡವನ್ನು ಹೊಂದಿದೆ ಎಂದು ಹೇಳಿದ್ದಾರೆ. 'ಕೂ' ನ ಮಾತೃಸಂಸ್ಥೆ, 3one4 ಕ್ಯಾಪಿಟಲ್, ಕಲಾರಿ ಕ್ಯಾಪಿಟಲ್, ಅಕ್ಸೆಲ್ ಹಾಗೂ ಬ್ಲೂಮ್ ವೆಂಚರ್ಸ್ ಸೇರಿದಂತೆ ಹತ್ತು ಹಲವು   ಭಾರತೀಯ ಹೂಡಿಕೆದಾರರಿಂದ ಕಳೆದ ವಾರ 4.1 ಮಿಲಿಯನ್ ಡಾಲರ್ ನ್ನು ಸಂಗ್ರಹಿಸಿದೆ. 

ಇದೇ ವೇಳೆ ಪ್ರಂಚ್ ನ ಇಂಟರ್ ನೆಟ್ ಸಂಶೋಧಕ ಎಲಿಯಟ್ ಆಂಡರ್ಸನ್ ಅಪ್ರಮೇಯ ಅವರನ್ನು " ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ದತ್ತಾಂಶ ಸಂಪೂರ್ಣ ಸುರಕ್ಷಿತವಾಗಿದೆಯೇ ಎಂದು ಪ್ರಶ್ನಿಸಿದ್ದರು. 'ಕೂ' ಆ್ಯಪ್‌ ನಲ್ಲಿ 30 ನಿಮಿಷಗಳ ಕಾಲ ಇದ್ದೆ, ಈ ವೇಳೆ ಇ-ಮೇಲ್ ವಿಳಾಸ, ಫೋನ್ ನಂಬರ್, ಲಿಂಗ, ಜನ್ಮ ದಿನಾಂಕ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳು ಸೋರಿಕೆಯಾಗುತ್ತಿರುವುದು ಕಂಡುಬಂದಿತ್ತು ಎಂದು ಹೇಳಿದ್ದಾರೆ. 

ಆಂಡರ್ಸನ್ ಅವರ ಹೇಳಿಕೆಯನ್ನು ತಳ್ಳಿಹಾಕಿರುವ ಅಪ್ರಮೇಯ, ಅನಗತ್ಯವಾಗಿ ದತ್ತಾಂಶ ಸೋರಿಕೆ ಬಗ್ಗೆ ಸುದ್ದಿಗಳನ್ನು ಚರ್ಚಿಸಲಾಗುತ್ತಿದೆ. ಬಳಕೆದಾರರೇ ಪ್ರೊಫೈಲ್ ನಲ್ಲಿ ಸ್ವಯಂ ಪ್ರೇರಿತರಾಗಿ ಕಾಣುವಂತೆ ಮಾಡಿದರೆ ಮಾತ್ರ ಅವುಗಳು ಕಾಣುತ್ತವೆ. ಅದನ್ನು ದತ್ತಾಂಶ ಸೋರಿಕೆ ಎನ್ನಲು ಸಾಧ್ಯವಿಲ್ಲ, ಪ್ರೊಫೈಲ್ ಗೆ ಹೋದಾಗ ಕಾಣಿಸುವಂತೆ ಮಾಡಿದ್ದರೆ ಕಾಣುತ್ತದೆಯಷ್ಟೇ ಎಂದು 'ಕೂ' ನಲ್ಲಿ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ. 

'ಕೂ' ಬಳಕೆದಾರರ ಪೈಕಿ ಶೇ.95 ರಷ್ಟು ಮೊಬೈಲ್ ನಂಬರ್ ಗಳ ಮೂಲಕ ಲಾಗ್ ಇನ್ ಆಗುತ್ತಾರೆ, ಭಾರತೀಯ ಸಮುದಾಯದಲ್ಲಿ ಹಲವು ಭಾಷೆಗಳ ಬಳಕೆದಾರರಿದ್ದಾರೆ ಆದ್ದರಿಂದ ಅವರು ಲಾಗ್ ಇನ್ ಆಗಲು ಇ-ಮೇಲ್ ಬಳಕೆ ಮಾಡುವುದಿಲ್ಲ, ಗ್ರಾಮೀಣ ಭಾಗಗಳಿಗೆ ಸಾಮಾಜಿಕ ಜಾಲತಾಣವನ್ನು ತಲುಪಿಸುವುದನ್ನು ಗುರಿಯಾಗಿಟ್ಟುಕೊಂಡು 'ಕೂ' ವಿನ್ಯಾಸಗೊಳಿಸಲಾಗಿದೆ. ಟ್ವಿಟರ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಸಿಗದ ಸ್ಥಳೀಯ ಭಾಷೆಗಳ ಬಳಕೆ ಇಲ್ಲಿ ಲಭ್ಯವಾಗುತ್ತದೆ ಎಂದು ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ. 

'ಕೂ' ಡೌನ್ ಲೋಡ್ ಮಾಡಿರುವವರ ಸಂಖ್ಯೆ 3 ಮಿಲಿಯನ್ ದಾಟಿದ್ದು, ಜನವರಿ-ಫೆಬ್ರವರಿ ತಿಂಗಳಲ್ಲಿ 1.2 ಮಿಲಿಯನ್ ಡೌನ್ ಲೋಡ್ ಆಗಿದೆ. ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳು, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವ್ಗಲ್ ಶ್ರೀನಾಥ್ ಸೇರಿದಂತೆ ಹಲವು ಖ್ಯಾತನಾಮರು ಈಗಾಗಲೇ 'ಕೂ' ಖಾತೆಯನ್ನು ಹೊಂದಿದ್ದು ಸಕ್ರಿಯರಾಗಿದ್ದಾರೆ. 

ಇಂಗ್ಲೀಷ್, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ 'ಕೂ' ಈಗಾಗಲೇ ಲಭ್ಯವಿದ್ದು, ಶೀಘ್ರವೇ ಮರಾಠಿ, ಬಾಂಗ್ಲಾ, ಗುಜರಾತಿ, ಪಂಜಾಬಿ, ಅಸ್ಸಾಮಿ ಭಾಷೆಯಗಳಲ್ಲೂ ಲಭ್ಯವಾಗಲಿದೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp