ಇವಿಎಂ ಮೇಲೆ ಸಂಪೂರ್ಣ ನಂಬಿಕೆ ಇದೆ, ಬ್ಯಾಲೆಟ್ ಗೆ ಮರಳುವ ಮಾತೆ ಇಲ್ಲ: ಅಜಿತ್ ಪವಾರ್
ಇವಿಎಂ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದ್ದು, ರಾಜ್ಯ ಸರ್ಕಾರ ಚುನಾವಣೆಯಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಬಳಕೆಯನ್ನು ಬಯಸುವುದಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಗುರುವಾರ ಹೇಳಿದ್ದಾರೆ.
Published: 11th February 2021 07:16 PM | Last Updated: 11th February 2021 07:16 PM | A+A A-

ಅಜಿತ್ ಪವಾರ್
ಮುಂಬೈ: ಇವಿಎಂ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದ್ದು, ರಾಜ್ಯ ಸರ್ಕಾರ ಚುನಾವಣೆಯಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಬಳಕೆಯನ್ನು ಬಯಸುವುದಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಗುರುವಾರ ಹೇಳಿದ್ದಾರೆ.
ಈ ಹಿಂದೆ, ಕಾಂಗ್ರೆಸ್ ಮತ್ತು ಎನ್ಸಿಪಿ ಸೇರಿದಂತೆ ಹಲವು ಬಿಜೆಪಿಯೇತರ ಪಕ್ಷಗಳು ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು ಮತ್ತು ಅವುಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದ್ದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಎನ್ ಸಿಪಿ ಹಿರಿಯ ನಾಯಕ ಅಜಿತ್ ಪವಾರ್ ಅವರು, ʼಇವಿಎಂಗಳನ್ನು ಬಳಸಿ ಚುನಾವಣೆಗಳನ್ನು ನಡೆಸಲಾದ ರಾಜಸ್ಥಾನ ಮತ್ತು ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಮಾಡುವುದೇನೆಂದರೆ, ಒಂದು ವೇಳೆ ಚುನಾವಣೆಗಳಲ್ಲಿ ತಮಗೆ ಬಾರೀ ಜನಾದೇಶ ಸಿಕ್ಕಿತೆಂದರೆ ಎಲ್ಲವೂ ಚೆನ್ನಾಗಿರುತ್ತದೆ. ಆದರೆ, ಸೋಲು ಕಂಡರೆ ಕೂಡಲೇ ಇವಿಎಂಗಳನ್ನು ದೂರಲಾರಂಭಿಸುತ್ತಾರೆ. ಆದರೆ ನನಗೆ ಇವಿಎಂಗಳ ಮೇಲೆ ಸಂಪೂರ್ಣ ವಿಶ್ವಾಸವಿದೆʼ ಎಂದಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗಿ ಇತ್ತೀಚೆಗೆ ನೇಮಕವಾಗಿರುವ ನಾನಾ ಪಟೋಲೆ ಅವರು, ಚುನಾವಣೆಗಳಲ್ಲಿ ಇವಿಎಂಗಳ ಬದಲು ಬ್ಯಾಲೆಟ್ ಪೇಪರ್ಗಳನ್ನು ಬಳಸುವ ಆಯ್ಕೆಯನ್ನು ಮತದಾರರಿಗೆ ನೀಡುವ ಕಾನೂನನ್ನು ರಚಿಸಬೇಕು ಎಂದು ಇತ್ತೀಚಿಗೆ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪವಾರ್, ಕಾಂಗ್ರೆಸ್ ಬ್ಯಾಲೆಟ್ ಪತ್ರ ಬಳಕೆಯ ಬಗ್ಗೆ ಪ್ರಸ್ತಾಪಿಸಿದರೆ, ಚರ್ಚಿಸಬಹುದು ಎಂದಿದ್ದಾರೆ.