ಪೂರ್ವ ಲಡಾಕ್ ನ ಪಾಂಗೊಂಗ್ ಪ್ರದೇಶದಿಂದ ಸೇನಾಪಡೆ ಹಿಂತೆಗೆತಕ್ಕೆ ಭಾರತ-ಚೀನಾ ಒಪ್ಪಂದ: ರಾಜ್ಯಸಭೆಗೆ ರಕ್ಷಣಾ ಸಚಿವ ವಿವರಣೆ

ಭಾರತಕ್ಕೆ ಸೇರಿದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ, ದೇಶದ ಭದ್ರತೆ ವಿಚಾರ ಬಂದಾಗ ನೆರೆ ದೇಶಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುನರುಚ್ಛರಿಸಿದ್ದಾರೆ.

Published: 11th February 2021 11:33 AM  |   Last Updated: 11th February 2021 01:11 PM   |  A+A-


Rajanath Singh spoke at Rajya Sabha

ರಾಜ್ಯಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

Posted By : Sumana Upadhyaya
Source : PTI

ನವದೆಹಲಿ: ಭಾರತಕ್ಕೆ ಸೇರಿದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ, ದೇಶದ ಭದ್ರತೆ ವಿಚಾರ ಬಂದಾಗ ನೆರೆ ದೇಶಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುನರುಚ್ಛರಿಸಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ಭಾರತ-ಚೀನಾ ಗಡಿ ವಿವಾದ, ಬೆಳವಣಿಗೆಗಳ ಬಗ್ಗೆ ಮಾಹಿತಿ ಕೊಟ್ಟ ರಕ್ಷಣಾ ಸಚಿವರು, ಪೂರ್ವ ಲಡಾಕ್ ನ ಪಾಂಗೊಂಗ್ ಸರೋವರ ತೀರದಲ್ಲಿ ಸೇನೆ ಹಿಂಪಡೆಯುವ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಮಾಡಿಕೊಂಡಿರುವ ಒಪ್ಪಂದ ಒಂದು ಹಂತಕ್ಕೆ ತಲುಪಿದೆ. ಸೇನೆ ಹಿಂಪಡೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದರು. ದೇಶದ ವಿಚಾರ ಬಂದಾಗ ಒಂದು ಇಂಚು ಭೂಮಿಯನ್ನು ಕೂಡ ಭಾರತ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಪಾದಿಸಿದರು.

ಚೀನಾ ಸೇನೆ ಜೊತೆ ಇದುವರೆಗೆ 9 ಸುತ್ತಿನ ಮಾತುಕತೆ ನಡೆದಿದೆ. ಅದರಲ್ಲಿ ಆದ ಒಪ್ಪಂದದ ಪ್ರಕಾರ, ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಲ್ಲಿ ಸೇನೆ ಹಿಂಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಹಂತ ಹಂತವಾಗಿ, ಸಮನ್ವಯ ಮಾದರಿಯಲ್ಲಿ ಗಡಿ ಸಮೀಪದ ಮೊದಲ ಸಾಲಿನಿಂದ ಭಾರತ-ಚೀನಾ ಸೇನಾಪಡೆಯನ್ನು ಹಿಂತೆಗೆದುಕೊಳ್ಳುತ್ತಿವೆ ಎಂದು ವಿವರ ನೀಡಿದರು.

ಪಾಕಿಸ್ತಾನ ಅಕ್ರಮವಾಗಿ ಭಾರತದ ಭೂಮಿಯನ್ನು ಚೀನಾಕ್ಕೆ ನೀಡಿದೆ. ಅಂತಹ ಒಪ್ಪಂದವನ್ನು ನಾವು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಭಾರತಕ್ಕೆ ಸೇರಿದ ಬೃಹತ್ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸುತ್ತಿದ್ದು, ಅಂತಹ ಅನಪೇಕ್ಷಿತ ಹೇಳಿಕೆಗಳನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ ಎಂದರು.

ಪೂರ್ವ ಲಡಾಕ್ ಭಾಗದಲ್ಲಿ ಚೀನಾ ಏಕಪಕ್ಷೀಯವಾಗಿ ಮುಂದೆ ಬಂದು ಸ್ಥಳವನ್ನು ಆಕ್ರಮಿಸಿಕೊಳ್ಳಲು ನೋಡುತ್ತಿದೆ, ಭಾರತವು ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಭಾರತ-ಚೀನಾ ಮಾಡಿಕೊಂಡಿರುವ ಒಪ್ಪಂದಗಳಿಗೆ ವಿರುದ್ಧವಾಗಿ ಚೀನಾ ಹೆಚ್ಚಿನ ಸಂಖ್ಯೆಯ ಸೈನ್ಯವನ್ನು ವಾಸ್ತವ ನಿಯಂತ್ರಣ ರೇಖೆಗೆ (ಎಲ್‌ಎಸಿ) ಸ್ಥಳಾಂತರಿಸಿದ ನಂತರ, ಭಾರತವೂ ಸಹ ದೊಡ್ಡ ಪ್ರಮಾಣದಲ್ಲಿ ಸೇನೆಯನ್ನು ಗಡಿಭಾಗದಲ್ಲಿ ನಿಯೋಜಿಸಬೇಕಾಗಿ ಬಂತು, ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ಹೆಚ್ಚಿನ ಸೈನ್ಯವನ್ನು ಇರಿಸಿದೆ ಎಂದು ಸದನಕ್ಕೆ ರಕ್ಷಣಾ ಸಚಿವರು ವಿವರಣೆ ನೀಡಿದರು.

ಪೂರ್ವ ಲಡಾಕ್ ನಲ್ಲಿನ ಸ್ಥಿತಿಗತಿ: ಪೂರ್ವ ಲಡಾಕ್‌ನ ಗಡಿ ವಾಸ್ತವ ರೇಖೆ ಬಳಿ ಅನೇಕ ಘರ್ಷಣೆ ಪ್ರದೇಶಗಳನ್ನು ಚೀನಾ ನಿರ್ಮಿಸಿದೆ. ಚೀನಾವು ಎಲ್‌ಎಸಿ ಬಳಿ ಭಾರೀ ಶಕ್ತಿ ಮತ್ತು ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಸಂಗ್ರಹಿಸಿದೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಸೇನೆ ನಿಯೋಜಿಸಿದೆ.

ಭಾರತ ಯಾವತ್ತಿಗೂ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಬಯಸುತ್ತದೆ. ಗಡಿ ವಾಸ್ತವ ರೇಖೆಯುದ್ಧಕ್ಕೂ ಶಾಂತಿಯುತ ವಾತಾವರಣ, ಪರಿಸ್ಥಿತಿಯನ್ನೇ ಉಳಿಸಿಕೊಂಡು ಹೋಗಲು ಭಾರತ ಬದ್ಧವಾಗಿದೆ ಎಂದರು.

ಕಳೆದ ವರ್ಷದ ನಂತರ ಚೀನಾದ ಜೊತೆಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟಗಳಲ್ಲಿ ನಾವು ಸಂಬಂಧವನ್ನು ನಿರ್ವಹಿಸಿಕೊಂಡು ಬಂದಿದ್ದೇವೆ. ಈಗಾಗಲೇ ನಡೆಸಿದ ಮಾತುಕತೆಯಲ್ಲಿ ನಾವು ಮೂರು ತತ್ವಗಳ ಆಧಾರದ ಮೇಲೆ ಸಮಸ್ಯೆಗಳಿಗೆ ಪರಿಹಾರವನ್ನು ಬಯಸಿದ್ದೇವೆ. ಚೀನಾ ತನ್ನ ಸೇನಾಪಡೆಗಳನ್ನು ಪಾಂಗೊಂಗ್ ಸರೋವರದ ಉತ್ತರ ತೀರದ ಫಿಂಗರ್ 8ರ ಪೂರ್ವದಲ್ಲಿ ನಿಯೋಜನೆಯನ್ನು ಮುಂದುವರಿಸುತ್ತದೆ. ಭಾರತ ಶಾಶ್ವತವಾಗಿ ಫಿಂಗರ್ ಪಾಯಿಂಟ್ 3ರಲ್ಲಿ ಸೇನಾಪಡೆ ನಿಯೋಜನೆಯನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು.

ದೇಶದ ಭದ್ರತೆ ವಿಚಾರ ಬಂದಾಗ ಯಾವುದೇ ಪಕ್ಷಗಳಾಗಿರಲಿ, ಭಾರತ ದೇಶ ಒಂದಾಗಿ, ಒಗ್ಗಟ್ಟಾಗಿ ನಿಲ್ಲುತ್ತದೆ ಎಂದು ಕೂಡ ರಾಜನಾಥ್ ಸಿಂಗ್ ಹೇಳಿದರು. 


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp