ಕಿರಿಯ ಸಿಬ್ಬಂದಿಯೊಂದಿಗೆ ಚೆಲ್ಲಾಟ ಸ್ವೀಕಾರಾರ್ಹವಲ್ಲ: ಮಧ್ಯಪ್ರದೇಶ ಮಾಜಿ ನ್ಯಾಯಾಧೀಶರಿಗೆ ಸುಪ್ರೀಂ ಎಚ್ಚರಿಕೆ
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಿಸ್ತು ಕ್ರಮ ಎದುರಿಸುತ್ತಿರುವ ಮಾಜಿ ಮಧ್ಯ ಪ್ರದೇಶ ನ್ಯಾಯಮೂರ್ತಿಗಳ ವರ್ತನೆಯನ್ನು ಖಂಡಿಸಿರುವ ಸುಪ್ರೀಂ ಕೋರ್ಟ್, ಕಿರಿಯ ಸಿಬ್ಬಂದಿಯೊಂದಿಗೆ ಚೆಲ್ಲಾಟವಾಡುವುದು ಸ್ವೀಕಾರಾರ್ಹವಲ್ಲ ಎಂದು ಎಚ್ಚರಿಸಿದೆ.
Published: 16th February 2021 06:06 PM | Last Updated: 16th February 2021 06:06 PM | A+A A-

ಸುಪ್ರೀಂ ಕೋರ್ಟ್
ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಿಸ್ತು ಕ್ರಮ ಎದುರಿಸುತ್ತಿರುವ ಮಾಜಿ ಮಧ್ಯ ಪ್ರದೇಶ ನ್ಯಾಯಮೂರ್ತಿಗಳ ವರ್ತನೆಯನ್ನು ಖಂಡಿಸಿರುವ ಸುಪ್ರೀಂ ಕೋರ್ಟ್, ಕಿರಿಯ ಸಿಬ್ಬಂದಿಯೊಂದಿಗೆ ಚೆಲ್ಲಾಟವಾಡುವುದು ಸ್ವೀಕಾರಾರ್ಹವಲ್ಲ ಎಂದು ಎಚ್ಚರಿಸಿದೆ.
ಮಧ್ಯ ಪ್ರದೇಶ ಹೈಕೋರ್ಟ್ನ ಶಿಸ್ತು ಕ್ರಮದ ವಿರುದ್ಧ ಮಾಜಿ ನ್ಯಾಯಾಂಗ ಅಧಿಕಾರಿ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಮಾಜಿ ಜಿಲ್ಲಾ ನ್ಯಾಯಾಧೀಶರು ಕಿರಿಯ ಮಹಿಳಾ ಅಧಿಕಾರಿಗೆ ಕಳುಹಿಸಿದ ವಾಟ್ಸಾಪ್ ಸಂದೇಶಗಳನ್ನು ವೀಕ್ಷಿಸಿದ ನಂತರ, ಸಿಜೆಐ ಬೊಬ್ಡೆ "ಕಿರಿಯ ಅಧಿಕಾರಿಗೆ ಆಕ್ರಮಣಕಾರಿ ಮತ್ತು ಅನುಚಿತ ಸಂದೇಶಗಳನ್ನು ಕಳುಹಿಸುವುದು ಮತ್ತು ಅವಳೊಂದಿಗೆ ಚೆಲ್ಲಾಟವಾಡುವುದು ಸ್ವೀಕಾರಾರ್ಹವಲ್ಲ" ಎಂದು ಅಭಿಪ್ರಾಯಪಟ್ಟರು.
ಮಹಿಳಾ ಅಧಿಕಾರಿ ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿ ದಾಖಲಿಸಿರುವ ತನ್ನ ದೂರನ್ನು ಹಿಂತೆಗೆದುಕೊಂಡಿದ್ದಾರೆ. ಆದ್ದರಿಂದ ಹೈಕೋರ್ಟ್ ಶಿಸ್ತು ಕ್ರಮಗಳನ್ನು ವಿಧಿಸುವಂತಿಲ್ಲ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಆರ್ ಬಾಲಸುಬ್ರಮಣ್ಯಂ ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ, ಮಧ್ಯ ಪ್ರದೇಶದ ಹೈಕೋರ್ಟ್ ಪರವಾಗಿ ಹಾಜರಾದ ಹಿರಿಯ ವಕೀಲ ರವೀಂದ್ರ ಶ್ರೀವಾಸ್ತವ ಅವರು ಲೈಂಗಿಕ ಕಿರುಕುಳ ಕಾಯ್ದೆಯಡಿ ಯಾವುದೇ ಕ್ರಮವನ್ನು ಬಯಸುವುದಿಲ್ಲ ಎಂದು ಹೇಳಿದರು.