ಕೃಷಿ ಕಾಯ್ದೆ ರದ್ದು ಮಾಡುವವರೆಗೂ ರೈತರು ಮನೆಗೆ ಮರಳುವುದಿಲ್ಲ: ಬಿಕೆಯು ನಾಯಕ ಗುರ್ನಮ್ ಸಿಂಗ್
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಒಕ್ಕೂಟ(ಬಿಕೆಯು) ರೈತರ ಹಕ್ಕುಗಳಿಗಾಗಿ ಹೋರಾಡುತ್ತಿದೆ ಮತ್ತು ಹೊಸ ಕೃಷಿ ಕಾನೂನುಗಳನ್ನು...
Published: 17th February 2021 07:02 PM | Last Updated: 17th February 2021 07:02 PM | A+A A-

ಮಹಾಪಂಚಾಯತ್ ವೇಳೆ ನೆರೆದಿದ್ದ ರೈತರು
ಸಂಭಾಲ್: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಒಕ್ಕೂಟ(ಬಿಕೆಯು) ರೈತರ ಹಕ್ಕುಗಳಿಗಾಗಿ ಹೋರಾಡುತ್ತಿದೆ ಮತ್ತು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ರೈತರು ದೆಹಲಿಯ ಗಡಿಯಿಂದ ಮನೆಗೆ ಮರಳುವುದಿಲ್ಲ ಎಂದು ಬಿಕೆಯು ಹರಿಯಾಣ ಅಧ್ಯಕ್ಷ ಗುರ್ನಮ್ ಸಿಂಗ್ ಚಾದುನಿ ಅವರು ಬುಧವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ "ಜನರಿಗೆ ಅಲ್ಲ, ಕಾರ್ಪೊರೇಟ್" ಕಂಪನಿಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ದೇಶಕ್ಕೆ ತಿಳಿಸಲು ಬಿಕೆಯು ಪಂಚಾಯತ್ ಮತ್ತು ಮಹಾಪಂಚಾಯತ್ಗಳಂತಹ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.
ಮಹಾಪಂಚಾಯತ್ ನಲ್ಲಿ ಭಾಗವಹಿಸುವುದಕ್ಕಾಗಿ ಮೊರಾದಾಬಾದ್ಗೆ ತೆರಳುತ್ತಿದ್ದ ಚಾದುನಿ ಅವರು, ಉತ್ತರ ಪ್ರದೇಶದ ಗೆಲುವಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. "ನಾವು ರೈತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ ಮತ್ತು ಈ ಹೋರಾಟದಲ್ಲಿ ಗೆಲ್ಲುವವರೆಗೂ ರೈತರು ಮನೆಗೆ ಹಿಂದಿರುಗುವುದಿಲ್ಲ. ಈ ಹೋರಾಟದಲ್ಲಿ ಸಮಯ ಅಪ್ರಸ್ತುತ ಎಂದರು.
ಇಡೀ ಕೃಷಿ ವ್ಯವಹಾರವನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಚಾದುನಿ ಅವರು, ರೈತರ ಆಂದೋಲನವು ಅವರ "ಉಳಿವಿಗಾಗಿ" ಎಂದು ಹೇಳಿದರು.
"ಕೃಷಿ ನಮ್ಮ ಜೀವನೋಪಾಯ. ಅದು ಬ್ಯುಸಿನೆಸ್ ಅಲ್ಲ. ದೇಶದ ಆಹಾರ ಧಾನ್ಯಗಳು ಕಾರ್ಪೊರೇಟ್ಗಳ ಗೋಡೌನ್ಗಳಿಗೆ ಹೋಗುತ್ತವೆ ಮತ್ತು ನಂತರ ಅವು ಕಪ್ಪು ಮಾರುಕಟ್ಟೆ ಸೇರುತ್ತವೆ. ಇದು ರೈತರು ಮಾತ್ರವಲ್ಲದೆ ಎಲ್ಲರ 'ಆಂದೋಲನ್' ಆಗಿದೆ" ಎಂದರು.