ಸಚಿವ ಜಾಕೀರ್ ಹುಸೈನ್ ಮೇಲೆ ಕಚ್ಚಾ ಬಾಂಬ್ ದಾಳಿ ಹಿಂದೆ ಬಹುದೊಡ್ಡ ಪಿತೂರಿ: ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಸಚಿವ ಜಾಕೀರ್ ಹುಸೈನ್ ಮೇಲೆ ಬುಧವಾರ ರಾತ್ರಿ ಕಚ್ಚಾ ಬಾಂಬ್ ದಾಳಿ ನಡೆದಿರುವುದರ ಹಿಂದೆ ಬಹುದೊಡ್ಡ ಪಿತೂರಿಯಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Published: 18th February 2021 01:40 PM | Last Updated: 18th February 2021 01:52 PM | A+A A-

ಮಮತಾ ಬ್ಯಾನರ್ಜಿ
ಕೊಲ್ಕೋತಾ: ಪಶ್ಚಿಮ ಬಂಗಾಳ ಸಚಿವ ಜಾಕೀರ್ ಹುಸೈನ್ ಮೇಲೆ ಬುಧವಾರ ರಾತ್ರಿ ಕಚ್ಚಾ ಬಾಂಬ್ ದಾಳಿ ನಡೆದಿರುವುದರ ಹಿಂದೆ ಬಹುದೊಡ್ಡ ಪಿತೂರಿಯಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ನನ್ನ ಸಚಿವ ಸಂಪುಟದ ಸದಸ್ಯರನ್ನು ಕೊಲ್ಲಲು ನಡೆದ ದೊಡ್ಡ ಪಿತೂರಿ ಇದಾಗಿತ್ತು ಎಂದು ಮಮತಾ ದೂರಿದ್ದಾರೆ. ಕಾರ್ಮಿಕ ಸಚಿವರ ಮೇಲೆ ದಾಳಿ ನಡೆದಾಗ ಸ್ಥಳದಲ್ಲಿ ರೈಲ್ವೆ ಪೊಲೀಸರು ಇರಲಿಲ್ಲ ಎಂದು ಆಪಾದಿಸಿದ್ದಾರೆ.
ಸಿಐಡಿ, ಎಸ್ ಟಿ ಎಫ್ ಮತ್ತು ಸಿಐಎಫ್ ಸಂಸ್ಥೆಗಳು ಪ್ರಕರಣದ ತನಿಖೆ ನಡೆಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಹುಸೈನ್ ಅವರ ಮೇಲೆ ಬಾಂಬ್ ದಾಳಿ ನಡೆಯಲು ಕಾರಣ ಏನು ಎಂಬುದು ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿದೆ.
ನಾನು ಸ್ಥಳೀಯ ಜನರಿಂದ ಮಾಹಿತಿಯನ್ನು ಸಂಗ್ರಹಿಸಿದ್ದೇನೆ, ಈ ಸ್ಫೋಟದ ಹಿಂದೆ ಬಹು ದೊಡ್ಡ ಪಿತೂರಿ ನಡೆದಿದೆ, ಸಚಿವರು ನಿಲ್ದಾಣದಿಂದ ಕೋಲ್ಕತ್ತಾಕ್ಕೆ ತೆರಳುವ ರೈಲು ಹತ್ತುತ್ತಾರೆ ಎಂಬ ಮಾಹಿತಿ ರೈಲ್ವೆಗೆ ಇಲ್ಲದಿರುವುದು ಆಶ್ಚರ್ಯಕರವಾಗಿದೆ, ರೈಲ್ವೆ ಇಲಾಖೆ ಅಧಿಕಾರಿಗಳು ಈ ವಿಷಯವನ್ನು ತುಂಬಾ ಹಗುರವಾಗಿ ತೆಗೆದುಕೊಂಡಿದ್ದಾರೆ ಎಂದು ಮಮತಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿತಾ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ದಾಳಿ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಶಾಸಕರ ಜೊತೆಗಿದ್ದ ಇನ್ನಿತರ ಇಬ್ಬರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆಯ ಕಾವು ಏರುತ್ತಿರುವಾಗಲೇ ಅಹಿತಕರ ಘಟನೆ ನಡೆದಿದೆ. ರಾತ್ರಿ 10 ಗಂಟೆ ಸುಮಾರಿಗೆ ಕೋಲ್ಕತ್ತಾಗೆ ರೈಲು ಹತ್ತಲು ನಿಲ್ದಾಣದಲ್ಲಿ ಕಾಯುತ್ತಿದ್ದ ಕಾರ್ಮಿಕ ಸಚಿವ ಹುಸೈನ್ ಮೇಲೆ ದಾಳಿ ನಡೆದಿದೆ ಎಂದು ಬಂಗಾಳ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.