ಟ್ಯಾಂಕ್ ನಿಗ್ರಹ ಕ್ಷಿಪಣಿಗಳಾದ ಹೆಲಿನಾ, ಧ್ರುವಾಸ್ತ್ರ ಪರೀಕ್ಷಾರ್ಥ ಉಡಾವಣೆ ಯಶಸ್ವಿ; ಶೀಘ್ರ ಸೇನೆಗೆ ಸೇರ್ಪಡೆ
ಡಿಆರ್ ಡಿಒ ನಿರ್ಮಿತ ಟ್ಯಾಂಕ್ ನಿಗ್ರಹ ಕ್ಷಿಪಣಿಗಳಾದ ಹೆಲಿನಾ, ಧುವಾಸ್ತ್ರ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಕ್ಷಿಪಣಿಗಳು ಶೀಘ್ರ ಸೇನೆ ಸೇರ್ಪಡೆಗೆ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
Published: 19th February 2021 04:40 PM | Last Updated: 19th February 2021 04:40 PM | A+A A-

ಹೆಲಿನಾ-ಧ್ರುವಾಸ್ತ್ರ ಕ್ಷಿಪಣಿ ಪರೀಕ್ಷೆ
ಭುವನೇಶ್ವರ: ಡಿಆರ್ ಡಿಒ ನಿರ್ಮಿತ ಟ್ಯಾಂಕ್ ನಿಗ್ರಹ ಕ್ಷಿಪಣಿಗಳಾದ ಹೆಲಿನಾ, ಧುವಾಸ್ತ್ರ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಕ್ಷಿಪಣಿಗಳು ಶೀಘ್ರ ಸೇನೆ ಸೇರ್ಪಡೆಗೆ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ಸೇನೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ (ಎಲ್ ಎ ಹೆಚ್) ನಲ್ಲಿ ಈ ಎರಡೂ ಕ್ಷಿಪಣಿಗಳನ್ನು ಪರೀಕ್ಷಾರ್ಥ ಉಡಾವಣೆ ಮಾಡಲಾಗಿದ್ದು, ಕ್ಷಿಪಣಿಗಳು ನಿಗದಿತ ಗುರಿಯನ್ನು ನಿಖರವಾಗಿ ತಲುಪಿವೆ. ಆ ಮೂಲಕ ಎರಡೂ ಕ್ಷಿಪಣಿಗಳ ಪರೀಕ್ಷೆ ಯಶಸ್ವಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ಎರಡೂ ಕ್ಷಿಪಣಿಗಳ ಪೈಕಿ ಹೆಲಿನಾ ಸೇನಾ ಆವೃತ್ತಿಯ ಕ್ಷಿಪಣಿಯಾಗಿದ್ದು, ಧ್ರುವಾಸ್ತ್ರ ವಾಯುಸೇನಾ ಆವೃತ್ತಿಯ ಕ್ಷಿಪಣಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಕ್ಷಿಪಣಿಗಳ ಸಾಮರ್ಥ್ಯಗಳನ್ನು ಕನಿಷ್ಠ ಮತ್ತು ಗರಿಷ್ಠ ವ್ಯಾಪ್ತಿಯಲ್ಲಿ ಮೌಲ್ಯಮಾಪನ ಮಾಡಲು ಐದು ಕಾರ್ಯಾಚರಣೆಗಳನ್ನು ನಡೆಸಲಾಯಿತು. ಐದೂ ಕಾರ್ಯಾಚರಣೆಯಲ್ಲಿ ಕ್ಷಿಪಣಿಗಳು ಉತ್ತಮ ಫಲಿತಾಂಶ ತೋರಿವೆ ಎನ್ನಲಾಗಿದೆ. ಈ ಕಾರ್ಯಾಚರಣೆಗಳಲ್ಲಿ ನಿಶ್ಚಲ ಗುರಿಗಳ ಮೇಲಿನ ದಾಳಿ ಮತ್ತು ಚಲಿಸುವ ಗುರಿಗಳ ಮೇಲಿನ ದಾಳಿಗಳೆರಡರಲ್ಲೂ ಕ್ಷಿಪಣಿ ನಿಖರವಾಗಿ ದಾಳಿ ಮಾಡಿದೆ ಎನ್ನಲಾಗಿದೆ.
#WATCH As part of joint user trials by Indian Army and Air Force, 4 HELINA anti-tank missiles were launched from ALH Dhruv helicopter in Rajasthan sector. 4 missions were carried out for evaluating missile capabilities in minimum & maximum range of 7 kms pic.twitter.com/9x42lVBMG2
— ANI (@ANI) February 19, 2021
ಇನ್ನು ಹೆಲಿನಾ ಮೂರನೇ ತಲೆಮಾರಿನ ಎಟಿಜಿಎಂ (ಆ್ಯಂಟ್ ಟ್ಯಾಂಕ್ ಗೈಡೆಡ್ ಮಿಸೈಲ್) ಆಗಿದ್ದು, ಇದು ನೇರ ಹಿಟ್ ಮೋಡ್ ಮತ್ತು ಟಾಪ್ ಅಟ್ಯಾಕ್ ಮೋಡ್ನಲ್ಲಿ ಗುರಿಗಳನ್ನು ಛಿದ್ರ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೆಲಿನಾ ಒಮ್ಮೆ ಗುರಿ ತೋರಿಸಿ ಉಡಾಯಿಸಿದರೆ ಗುರಿ ತಪ್ಪುವ ಮಾತೇ ಇಲ್ಲ. ಗುರಿ ಎಲ್ಲೇ ಇರಲಿ... ಹೇಗೆ ಚಲಿಸಲಿ ಕ್ಷಣ ಮಾತ್ರದಲ್ಲಿ ಧ್ವಂಸ ಮಾಡುತ್ತದೆ. ಈ ಕ್ಷಿಪಣಿ ವ್ಯವಸ್ಥೆಯು ಎಲ್ಲಾ ಹವಾಮಾನದಲ್ಲೂ ನಿಖರವಾಗಿ ಕಾರ್ಯ ನಿರ್ವಹಿಸಲಿದ್ದು, ಹಗಲು ಮತ್ತು ರಾತ್ರಿ ಸಾಮರ್ಥ್ಯವನ್ನು ಹೊಂದಿದೆ.
ಈ ಕ್ಷಿಪಣಿ ಸೇರ್ಪಡೆ ಮೂಲಕ ಸೇನೆಯ ಎಎಲ್ಹೆಚ್ ಧ್ರುವ್, ಎಚ್ಎಎಲ್ ನಿರ್ಮಿತ ಯುದ್ಧ ಹೆಲಿಕಾಪ್ಟರ್ ರುದ್ರ ಮತ್ತು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್ಸಿಎಚ್) ನ ಶಸ್ತ್ರಾಸ್ತ್ರ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲಿದೆ. ನಾಗ್ ಕ್ಷಿಪಣಿ ಗರಿಷ್ಠ 4 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದರೆ, ಹೆಲಿನಾ ಸುಮಾರು 8 ಕಿ.ಮೀ ವ್ಯಾಪ್ತಿ ಹೊಂದಿದೆ. ಇಮೇಜಿಂಗ್ ಇನ್ಫ್ರಾರೆಡ್ ಸೀಕರ್ ವ್ಯವಸ್ಥೆ ಹೆಲಿನಾ ಕ್ಷಿಪಣಿಯ ವ್ಯಾಪ್ತಿಯನ್ನು ಹೆಚ್ಚಿಸಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಮಾತನಾಡಿ, ಹೆಲಿನಾ ವಿಶ್ವದ ಅತ್ಯಾಧುನಿಕ ಟ್ಯಾಂಕ್ ನಿಗ್ರಹ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿದೆ. ಈಗ ಕ್ಷಿಪಣಿಗಳು ಸೇನಾ ಸೇವೆಗೆ ಸಿದ್ಧವಾಗಿವೆ ಎಂದು ಹೇಳಿದರು. ಇನ್ನು ಕ್ಷಿಪಣಿಗಳ ಯಶಸ್ವೀ ಪರೀಕ್ಷಾರ್ಥ ಉಡಾವಣೆಗಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಡಿಆರ್ಡಿಒ, ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗೆ ಅಭಿನಂದನೆ ಸಲ್ಲಿಸಿದರು.