ಕೇವಲ 34 ದಿನಗಳಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ: ಭಾರತದಿಂದ ಹೊಸ ಮೈಲಿಗಲ್ಲು
ದೇಶದಲ್ಲಿ ಆರಂಭಗೊಂಡ ಕೋವಿಡ್-19 ಲಸಿಕೆ ಅಭಿಯಾನ, ಕೇವಲ 34 ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕುವ ಹೊಸ ಮೈಲಿಗಲ್ಲು ಸಾಧಿಸಿದೆ.
Published: 19th February 2021 04:17 PM | Last Updated: 19th February 2021 04:17 PM | A+A A-

ಕೊರೋನಾ ಲಸಿಕೆ ವಿತರಣೆ
ನವದೆಹಲಿ: ದೇಶದಲ್ಲಿ ಆರಂಭಗೊಂಡ ಕೋವಿಡ್-19 ಲಸಿಕೆ ಅಭಿಯಾನ, ಕೇವಲ 34 ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕುವ ಹೊಸ ಮೈಲಿಗಲ್ಲು ಸಾಧಿಸಿದೆ.
ಅಮೆರಿಕ 31 ದಿನಗಳಲ್ಲಿ ಈ ಮೈಲಿಗಲ್ಲು ತಲುಪಿತ್ತು. ರಷ್ಯಾ ಈ ಹಂತ ತಲುಪಲು 56 ದಿನ ತೆಗೆದುಕೊಂಡಿತ್ತು. ದೇಶದಲ್ಲಿ 2.11 ಲಕ್ಷ ಸೆಷನ್ ಗಳ ಮೂಲಕ ಒಟ್ಟು 1,01,88,007 ಜನರಿಗೆ ಲಸಿಕೆ ನೀಡಲಾಗಿದ್ದು, ಎಂಟು ರಾಜ್ಯಗಳ ಕೊಡುಗೆ ದೇಶದಲ್ಲಿ ನೀಡಲಾದ ಒಟ್ಟು ಲಸಿಕೆಯ ಶೇ. 57.47 ರಷ್ಟಿದೆ. ಉತ್ತರ ಪ್ರದೇಶದಲ್ಲಿ ಮಾತ್ರ ಶೇ.10.5 (10,70,895) ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 16 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಹೊಸ ಕೋವಿಡ್ ಸಾವು ಸಂಭವಿಸಿಲ್ಲ. ಈಗಾಗಲೇ 1ನೇ ಡೋಸ್ ಲಸಿಕೆ ಸ್ವೀಕರಿಸಿದ 28 ದಿನಗಳ ನಂತರ ಪೂರ್ಣಗೊಂಡ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಫೆ.13ರಂದು ಆರಂಭಗೊಂಡಿದೆ.
ಲಸಿಕೆಯ 34 ದಿನವಾದ ಗುರುವಾರ ಒಟ್ಟು 6,58,674 ಜನರಿಗೆ ಲಸಿಕೆ ನೀಡಲಾಗಿದೆ. ಅದರಲ್ಲಿ 4,16,942 ಫಲಾನುಭವಿಗಳಿಗೆ 10,812 ಸೆಷನ್ ಗಳಲ್ಲಿ 1 ನೇ ಡೋಸ್ ಗೆ (ಎಚ್ ಸಿಡಬ್ಲ್ಯೂ ಮತ್ತು ಎಫ್ ಎಲ್ ಡಬ್ಲ್ಯೂ) ಲಸಿಕೆ ನೀಡಲಾಯಿತು ಮತ್ತು 2,41,732 ಎಚ್ ಸಿಡಬ್ಲ್ಯುಗಳು 2 ನೇ ಡೋಸ್ ಲಸಿಕೆ ಪಡೆದರು.
ಗುಜರಾತ್, ಹಿಮಾಚಲ ಪ್ರದೇಶ, ಗೋವಾ, ಜಾರ್ಖಂಡ್, ಮೇಘಾಲಯ, ಪುದುಚೇರಿ, ಚಂಡೀಗಢ, ಮಣಿಪುರ, ಮಿಜೋರಾಂ, ಲಕ್ಷದ್ವೀಪ, ಸಿಕ್ಕಿಂ, ಅರುಣಾಚಲ ಪ್ರದೇಶ, ಲಡಾಖ್ (ಯುಟಿ), ತ್ರಿಪುರ, ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ಡಿಯೂ ಡಾಮನ್ ಗಳಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ.
ದೇಶದಲ್ಲಿ ಪ್ರಸ್ತುತ 1.39 ಲಕ್ಷ ಸಕ್ರಿಯ ಪ್ರಕರಣಗಳಿವೆ. ಸದ್ಯ ಚೇತರಿಕೆ ಪ್ರಕರಣ ಶೇ.97.30ರಷ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1.06 ಕೋಟಿ ತಲುಪಿದೆ.