ರೈತರ ಪ್ರತಿಭಟನೆ ಬೆಂಬಲಿಸುವುದು ದೇಶದ್ರೋಹವಾಗಿದ್ದರೆ, ಜೈಲಿನಲ್ಲಿರುವುದೇ ಉತ್ತಮ: ದಿಶಾ ರವಿ
ಕೃಷಿ ಕಾಯ್ದೆಯ ವಿರುದ್ಧದ ರೈತರ ಪ್ರತಿಭಟನೆ ಬೆಂಬಲಿಸುವುದು ದೇಶದ್ರೋಹವಾಗಿದ್ದರೆ ನಾನು ಜೈಲಿನಲ್ಲಿರುವುದೇ ಉತ್ತಮ ಎಂದು ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ...
Published: 20th February 2021 06:25 PM | Last Updated: 20th February 2021 06:25 PM | A+A A-

ದಿಶಾ ರವಿ
ನವದೆಹಲಿ: ಕೃಷಿ ಕಾಯ್ದೆಯ ವಿರುದ್ಧದ ರೈತರ ಪ್ರತಿಭಟನೆ ಬೆಂಬಲಿಸುವುದು ದೇಶದ್ರೋಹವಾಗಿದ್ದರೆ ನಾನು ಜೈಲಿನಲ್ಲಿರುವುದೇ ಉತ್ತಮ ಎಂದು ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರು ತಮ್ಮ ವಕೀಲರ ಮೂಲಕ ದೆಹಲಿ ಕೋರ್ಟ್ ಗೆ ತಿಳಿಸಿದ್ದಾರೆ.
ದಿಶಾ ರವಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಆರೋಪಿ ಪರ ವಾದ ಮಂಡಿಸಿದ ವಕೀಲರು, ಜನವರಿ 26 ರಂದು ನಡೆದ ಹಿಂಸಾಚಾರಕ್ಕೆ ಟೂಲ್ಕಿಟ್ ಕಾರಣ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
"ರೈತರ ಪ್ರತಿಭಟನೆಯನ್ನು ಜಾಗತಿಕವಾಗಿ ಎತ್ತಿ ತೋರಿಸುವುದು ದೇಶದ್ರೋಹವಾಗಿದ್ದರೆ, ನಾನು ಜೈಲಿನಲ್ಲಿರುವುದೇ ಉತ್ತಮ" ಎಂದು ದಿಶಾ ರವಿ ಅವರು ತಮ್ಮ ವಕೀಲರ ಮೂಲಕ ಕೋರ್ಟ್ ಗೆ ತಿಳಿಸಿದ್ದಾರೆ.
ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು, ಆರೋಪಿ ದಿಶಾ ರವಿ ಖಲಿಸ್ತಾನಿ ಪರವಾದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ (ಪಿಜೆಎಫ್) ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಭಾರತವನ್ನು ಅವಹೇಳನ ಮಾಡಲು ಮತ್ತು ರೈತರ ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿಯನ್ನು ಉಂಟುಮಾಡುವ ಜಾಗತಿಕ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
ದೆಹಲಿ ಪೊಲೀಸರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ದಿಶಾ ರವಿ ಪರ ವಕೀಲರು, ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ನೊಂದಿಗೆ ನಂಟು ಹೊಂದಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಮತ್ತು ನಾನು(ದಿಶಾ ರವಿ) ಯಾರನ್ನಾದರೂ ಭೇಟಿಯಾದರೆ, ಅವರು ಪ್ರತ್ಯೇಕತಾವಾದಿ ಎಂಬುದಕ್ಕೆ ಯಾವುದೇ ಚಿಹ್ನೆ ಇಲ್ಲ ಎಂದು ವಾದಿಸಿದರು.
"ರೈತರ ಪ್ರತಿಭಟನಾ ಮೆರವಣಿಗೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ ನಂತರ ನಾನು (ರವಿ) ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಜನರಲ್ಲಿ ಮನವಿ ಮಾಡಿದ್ದೇನೆ. ಇದು ಹೇಗೆ ದೇಶದ್ರೋಹವಾಗುತ್ತದೆ? ಎಂದು ವಕೀಲರು ನ್ಯಾಯಾಲಯವನ್ನು ಪ್ರಶ್ನಿಸಿದರು.
"ಇದು ಕೇವಲ ಟೂಲ್ ಕಿಟ್ ಮಾತ್ರ ಅಲ್ಲ. ಭಾರತವನ್ನು ಕೆಣಕುವುದು ಮತ್ತು ಇಲ್ಲಿ ಅಶಾಂತಿ ಸೃಷ್ಟಿಸುವುದು ಆರೋಪಿಯ ನಿಜವಾದ ಉದ್ದೇಶ" ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರ ಮುಂದೆ ಪೊಲೀಸರು ತಿಳಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ದೆಹಲಿ ಪಟಿಯಾಲ ಹೌಸ್ ಕೋರ್ಟ್, ಜಾಮೀನು ಅರ್ಜಿಯ ತೀರ್ಪನ್ನು ಫೆಬ್ರವರಿ 23ಕ್ಕೆ ಕಾಯ್ದಿರಿಸಿದೆ.