ದಿಶಾ ರವಿ ವಿರುದ್ಧ ನಿಖರವಾದ ಸಾಕ್ಷ್ಯ ಏನಿದೆ?: ದೆಹಲಿ ಪೊಲೀಸರಿಗೆ ಕೋರ್ಟ್ ಪ್ರಶ್ನೆ
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರ ವಿರುದ್ಧ ನಿಖರವಾಗಿ ಯಾವ ಸಾಕ್ಷ್ಯ ನಿಮ್ಮ ಬಳಿ ಇದೆ ಎಂದು ಕೋರ್ಟ್ ದೆಹಲಿ ಪೊಲೀಸರಿಗೆ ಪ್ರಶ್ನಿಸಿದೆ.
Published: 20th February 2021 05:24 PM | Last Updated: 20th February 2021 05:25 PM | A+A A-

ದಿಶಾ ರವಿ
ನವದೆಹಲಿ: ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರ ವಿರುದ್ಧ ನಿಖರವಾಗಿ ಯಾವ ಸಾಕ್ಷ್ಯ ನಿಮ್ಮ ಬಳಿ ಇದೆ ಎಂದು ಕೋರ್ಟ್ ದೆಹಲಿ ಪೊಲೀಸರಿಗೆ ಪ್ರಶ್ನಿಸಿದೆ.
ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದಿಶಾ ರವಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ, ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು, ದೆಹಲಿ ಪೊಲೀಸರ ಉತ್ತರವನ್ನು ಕೋರ್ಟ್ ಗೆ ತಿಳಿಸಿದರು.
ಆರೋಪಿ ದಿಶಾ ರವಿ ಖಲಿಸ್ತಾನಿ ಪರವಾದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ (ಪಿಜೆಎಫ್) ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಭಾರತವನ್ನು ಅವಹೇಳನ ಮಾಡಲು ಮತ್ತು ರೈತರ ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿಯನ್ನು ಉಂಟುಮಾಡುವ ಜಾಗತಿಕ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಖಲಿಸ್ತಾನವನ್ನು ಪ್ರತಿಪಾದಿಸುವವರೊಂದಿಗೆ ಸೇರಿ ಟೂಲ್ ಕಿಟ್ ತಯಾರಿಸಿ ಹಂಚಿಕೊಂಡಿದ್ದಾಳೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
"ಇದು ಕೇವಲ ಟೂಲ್ ಕಿಟ್ ಮಾತ್ರ ಅಲ್ಲ. ಭಾರತವನ್ನು ಕೆಣಕುವುದು ಮತ್ತು ಇಲ್ಲಿ ಅಶಾಂತಿ ಸೃಷ್ಟಿಸುವುದು ಆರೋಪಿಯ ನಿಜವಾದ ಉದ್ದೇಶ" ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರ ಮುಂದೆ ಪೊಲೀಸರು ತಿಳಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ದೆಹಲಿ ಪಟಿಯಾಲ ಹೌಸ್ ಕೋರ್ಟ್, ಜಾಮೀನು ಅರ್ಜಿಯ ತೀರ್ಪನ್ನು ಫೆಬ್ರವರಿ 23ಕ್ಕೆ ಕಾಯ್ದಿರಿಸಿದೆ.