ಅನಾಥ ಶವಗಳ ಸಂಸ್ಕಾರ ಮಾಡಿ ಪದ್ಮಶ್ರೀಗೆ ಆಯ್ಕೆಯಾದ ಮೊಹಮ್ಮದ್ ಶರೀಫ್ ಗೆ ಅನಾರೋಗ್ಯ: ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬೇಕು ನೆರವಿನ ಹಸ್ತ
83 ವರ್ಷದ ಫೈಜಾಬಾದ್ ನಿವಾಸಿ ಮೊಹಮ್ಮದ್ ಶರೀಫ್ ಕಳೆದ 25 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಅಲ್ಲದೆ ಇದೇ ಸಮಾಜ ಸೇವಾ ಕಾರ್ಯಕ್ಕಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿದೆ. ಅವರಿಗೀಗ ಗಂಭೀರ ಕಾಯಿಲೆ ಕಾಣಿಸಿಕೊಂಡಿದ್ದು ಬಡತನದ ಕಾರಣ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ .
Published: 20th February 2021 10:28 PM | Last Updated: 20th February 2021 10:29 PM | A+A A-

ಮೊಹಮ್ಮದ್ ಶರೀಫ್
ಅಯೋಧ್ಯೆ: 83 ವರ್ಷದ ಫೈಜಾಬಾದ್ ನಿವಾಸಿ ಮೊಹಮ್ಮದ್ ಶರೀಫ್ ಕಳೆದ 25 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಅಲ್ಲದೆ ಇದೇ ಸಮಾಜ ಸೇವಾ ಕಾರ್ಯಕ್ಕಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿದೆ. ಅವರಿಗೀಗ ಗಂಭೀರ ಕಾಯಿಲೆ ಕಾಣಿಸಿಕೊಂಡಿದ್ದು ಬಡತನದ ಕಾರಣ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ .
ಮೊಹಲ್ಲಾ ಖಿರ್ಕಿ ಅಲಿ ಬೇಗ್ನಲ್ಲಿರುವ ಮೊಹಮ್ಮದ್ ಶರೀಫ್ ಅವರ ಮನೆಗೆ ಗುರುವಾರ ಪಿಟಿಐ ವರದಿಗಾರ ಭೇಟಿ ನೀಡಿದ್ದಾಗ ಅವರು ಹಾಸಿಗೆ ಹಿಡಿದಿದ್ದರು.
"ಶರೀಫ್ ಚಾಚಾ" ಎಂದು ಅವರ ಅಕ್ಕಪಕ್ಕದವರಿಂದ ಪ್ರೀತಿಯಿಂದ ಕರೆಯಲ್ಪಡುವ ಮೊಹಮ್ಮದ್ ಶರೀಫ್ ಹಾಸಿಗೆಯ ಮೇಲೆ ಪ್ರಜ್ಞಾಹೀನನಾಗಿ ಮಲಗಿದ್ದು ಪದ್ಮಶ್ರೀ ವಿಜೇತರ ಚಿಕಿತ್ಸೆಗಾಗಿ ಪ್ರಶಸ್ತಿ ಫಲಕದ ಬದಲು ಪಿಂಚಣಿ ಹಣ ನೀಡಬೇಕೆಂದು ಅವರ ಕುಟುಂಬ ಸದಸ್ಯರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಮೊಹಮ್ಮದ್ ಶರೀಫ್ ಅವರ ಪುತ್ರ ಶಗೀರ್ ಅವರು ಕಳೆದ ವರ್ಷ ಕೇಂದ್ರ ಗೃಹ ಸಚಿವಾಲಯದಿಂದ ತಮ್ಮ ತಂದೆಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾಗಿ ಪತ್ರ ಬಂದಿತ್ತು ಎಂದಿದ್ದಾರೆ.ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ಜನವರಿ 31, 2020 ರ ಪತ್ರದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದಿದೆ.
ಫೈಜಾಬಾದ್ನ ಬಿಜೆಪಿ ಸಂಸದ ಲಲ್ಲು ಸಿಂಗ್ ಅವರ ಶಿಫಾರಸ್ಸಿನ ಮೇರೆಗೆ ಪ್ರಶಸ್ತಿಗಾಗಿ ಮೊಹಮ್ಮದ್ ಶರೀಫ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸಿಂಗ್ ಅವರನ್ನು ಕೇಳಿದಾಗ ಅವರೂ ಆಶ್ಚರ್ಯ ವ್ಯಕ್ತಪಡಿಸಿಅವರು "ಇನ್ನೂ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲವೇ? ಸರಿ, ನಾನು ಪರಿಶೀಲಿಸುತ್ತೇನೆ." ಎಂದು ಭರವಸೆ ನೀಡಿದರು.
ಶಗೀರ್ ಅವರು ಖಾಸಗಿ ವಾಹನ ಚಾಲಕನಾಗಿ ದುಡಿಯುತ್ತಿದ್ದು ತಿಂಗಳಿಗೆ 7,000 ರೂ. ಗಳಿಸುತ್ತಿದ್ದಾರೆ.ಆದರೆ ಅವರ ತಂದೆಯ ಚಿಕಿತ್ಸೆಗೆ ಮಾತ್ರವೇ ತಿಂಗಳಿಗೆ 4,000 ರೂ. ಅಗತ್ಯವಿದೆ. "ನಾವು ತುಂಬಾ ಕಷ್ಟ ಅನುಭವಿಸುತ್ತೇವೆ.. ಮನೆಯ ಖರ್ಚುಗಳನ್ನು ಸಹ ಪೂರೈಸಲು ನಮಗೆ ಸಾಧ್ಯವಾಗುತ್ತಿಲ್ಲ. ಹಣದ ಕೊರತೆಯಿಂದಾಗಿ, ನನ್ನ ತಂದೆಗೆ ಸರಿಯಾದ ಚಿಕಿತ್ಸೆಯನ್ನು ನೀಡಲು ನಮಗೆ ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳಿದರು. "ಇತ್ತೀಚಿನವರೆಗೂ, ನಾವು ಅವರ ಚಿಕಿತ್ಸೆಗಾಗಿ ಸ್ಥಳೀಯ ವೈದ್ಯರನ್ನು ಅವಲಂಬಿಸಿದ್ದೇವೆ. ಆದರೆ ಹಣದ ಕೊರತೆಯಿಂದಾಗಿ, ಅದನ್ನೂ ಸಹ ನಾವು ಭರಿಸಲಾಗುತ್ತಿಲ್ಲ" ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.