ಸಂಬಂಧದ ಬಗ್ಗೆ ವದಂತಿ: ಪ್ರಿಯತಮೆಗೆ ಗುಂಡಿಕ್ಕಿ ಕೊಂದ ಸ್ನಾತಕೋತ್ತರ ವಿದ್ಯಾರ್ಥಿ
ಭೀಕರ ಘಟನೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ಸಹಪಾಠಿಗಳಿಗೆ ಗುಂಡಿಕ್ಕಿದ್ದು ಘಟನೆಯಲ್ಲಿ ಗೆಳತಿ ಸಾವನ್ನಪ್ಪಿದ್ದು ಮತ್ತೋರ್ವ ಸಹಪಾಠಿ ಗಂಭೀರವಾಗಿ ಗಾಯಗೊಂಡಿದ್ದಾನೆ.
Published: 20th February 2021 04:57 PM | Last Updated: 20th February 2021 04:57 PM | A+A A-

ಆರೋಪಿ ಮಂಥನ್-ಕೃತಿಕಾ
ಲಖನೌ: ಭೀಕರ ಘಟನೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ಸಹಪಾಠಿಗಳಿಗೆ ಗುಂಡಿಕ್ಕಿದ್ದು ಘಟನೆಯಲ್ಲಿ ಗೆಳತಿ ಸಾವನ್ನಪ್ಪಿದ್ದು ಮತ್ತೋರ್ವ ಸಹಪಾಠಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಉತ್ತರ ಪ್ರದೇಶದ ಬುಂದೇಲ್ಖಂಡ್ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಸೈಕಾಲಜಿ ಪಿಜಿ ವಿದ್ಯಾರ್ಥಿಯಾಗಿರುವ ಮಂಥನ್ ಸಿಂಗ್ ಸೆಂಗರ್ ತನ್ನ ಸಹಪಾಠಿಗಳಾದ 22 ವರ್ಷದ ಹುಕ್ಮೇಂದ್ರ ಸಿಂಗ್ ಗುರ್ಜಾರ್ ಮತ್ತು 22 ವರ್ಷದ ಕೃತಿಕಾ ತ್ರಿವೇದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
ತರಗತಿಗಳು ನಡೆಯುತ್ತಿರುವಾಗ ಕಾಲೇಜು ಆವರಣಕ್ಕೆ ಪಿಸ್ತೂಲ್ ತೆಗೆದುಕೊಂಡು ಬಂದ ಆರೋಪಿ ಮಂಥನ್ ಸಿಂಗ್ ಸೆಂಗರ್, ತರಗತಿಯಲ್ಲಿದ್ದ ಹುಕ್ಮೇಂದ್ರ ತಲೆಯ ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಗುರ್ಜರ್ ನಿಗೆ ಗುಂಡಿಕ್ಕಿದ ನಂತರ ಕೃತಿಕಾಳನ್ನು ಹುಡುಕಿದ್ದಾನೆ. ಆದರೆ ಆಕೆ ಕಾಲೇಜಿಗೆ ಬಂದಿಲ್ಲ ಎಂದು ತಿಳಿದು ಆಕೆಯ ಮನೆಗೆ ಹೋಗಿದ್ದಾನೆ.
ಸಿಪ್ರೀ ಬಜಾರ್ ಪ್ರದೇಶದಲ್ಲಿ ಕೃತಿಕಾ ವಾಸವಿದ್ದು ಮನೆಯ ಮುಂದೆ ಅಜ್ಜಿ ಜೊತೆ ಕುಳಿತಿದ್ದ ಕೃತಿಕಾಳಿಗೆ ಗುಂಡಿಕ್ಕಿದ್ದಾನೆ. ಕೃತಿಕಾ ಅಲ್ಲೆ ಕುಸಿದು ಬಿದ್ದಿದ್ದಾಳೆ. ಗುಂಡಿನ ಸದ್ದು ಕೇಳಿದ ಕೂಡಲೇ ಕೃತಿಕಾ ಸಂಬಂಧಿಕರು ಹಾಗೂ ನೆರೆಮನೆಯವರು ಮನೆಗಳಿಂದ ಹೊರಬಂದು ಗುಂಡು ಹಾರಿಸಿದ್ದ ಮಂಥನ್ ಸಿಂಗ್ ನನ್ನು ಹಿಡಿದು ವಿದ್ಯುತ್ ಕಂಬದಲ್ಲಿ ಕಟ್ಟಿಹಾಕಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮಂಥನನ್ನು ಬಂಧಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೃತಿಕಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೆ ಆಕೆ ಮೃತಪಟ್ಟಿದ್ದಳು. ಇನ್ನು ಜೀವನಕ್ಕಾಗಿ ಹೋರಾಡುತ್ತಿರುವ ಹುಕುಮೇಂದ್ರನನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕರೆದೊಯ್ಯಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮಂಥನ್ ನಿವಾರಿ ಜಿಲ್ಲೆಗೆ ಸೇರಿದ್ದು ಹುಕ್ಮೇಂದ್ರ ಮತ್ತು ಕೃತಿಕ ಝಾನ್ಸಿಗೆ ಸೇರಿದವರು. 2016ರಿಂದ ಮೂವರೂ ನಿಕಟ ಪರಿಚಯ ಹೊಂದಿದ್ದರು. ಅದೇ ಕಾಲೇಜಿನಲ್ಲಿ ಗುಮಾಸ್ತರಾಗಿರುವ ಹುಕುಮೇಂದ್ರ ಅವರ ಚಿಕ್ಕಪ್ಪ ಸಂಜಯ್ ಸಿಂಗ್, ಹುಡುಗರಿಬ್ಬರೂ ಉತ್ತಮ ಸ್ನೇಹಿತರು ಎಂದು ಹೇಳಿದ್ದಾರೆ.
ಹುಕ್ಮೇಂದ್ರ ತನ್ನ ಬಗ್ಗೆ ಕೆಲವು ವದಂತಿಗಳನ್ನು ಹರಡುತ್ತಿದ್ದಾನೆ ಎಂದು ಅನುಮಾನಗೊಂಡು ಮಂಥನ್ ಈ ಕೃತ್ಯ ಎಸಗಿದ್ದಾನೆ. ಸದ್ಯ ಆರೋಪಿ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿದ್ದೇವೆ. ಕೊಲೆಗೆ ಬಳಸಿದ್ದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದೇವೆ. ಅದು 0.32 ಬೋರ್ ಕಂಟ್ರಿ ಮೇಡ್ ಗನ್ ಎಂದು ಪೋಲೀಸ್ ತಿಳಿಸಿದ್ದಾರೆ.