ಉನ್ನಾವೊ ದಲಿತ ಬಾಲಕಿಯರ ಕೊಲೆ ಪ್ರಕರಣ: ಬದುಕುಳಿದ ಅಪ್ರಾಪ್ತ ಬಾಲಕಿಯ ಆರೋಗ್ಯದಲ್ಲಿ ಚೇತರಿಕೆ
ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಹಳ್ಳಿಯೊಂದರಲ್ಲಿ ಎರಡು ದಿನಗಳ ಹಿಂದಷ್ಟೇ ಮೇವು ತರಲು ಹೋದ ಮೂವರು ದಲಿತ ಬಾಲಕಿಯರಲ್ಲಿ ಇಬ್ಬರು ಕೊಲೆಯಾಗಿದ್ದು, ಬದುಕುಳಿದಿದ್ದ ಮತ್ತೊಬ್ಬ ಬಾಲಕಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು,...
Published: 20th February 2021 08:35 PM | Last Updated: 20th February 2021 08:36 PM | A+A A-

ಘಟನೆ ನಡೆದ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿ
ಕಾನ್ಪುರ್: ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಹಳ್ಳಿಯೊಂದರಲ್ಲಿ ಎರಡು ದಿನಗಳ ಹಿಂದಷ್ಟೇ ಮೇವು ತರಲು ಹೋದ ಮೂವರು ದಲಿತ ಬಾಲಕಿಯರಲ್ಲಿ ಇಬ್ಬರು ಕೊಲೆಯಾಗಿದ್ದು, ಬದುಕುಳಿದಿದ್ದ ಮತ್ತೊಬ್ಬ ಬಾಲಕಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶನಿವಾರ ವೆಂಟಿಲೇಟರ್ ತೆಗೆಯಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಬುಧವಾರ ಉನ್ನಾವೋದ ಬಾಬುಹಾರ ಗ್ರಾಮದಲ್ಲಿ 16, 15, 14 ವರ್ಷದ ಮೂವರು ಬಾಲಕಿಯರ ಪೈಕಿ ಇಬ್ಬರು ಶವವಾಗಿ ಪತ್ತೆಯಾಗಿದ್ದು, ಮತ್ತೊಬ್ಬ ಬಾಲಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಬಾಲಕಿ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ವೆಂಟಿಲೇಟರ್ನಿಂದ ಹೊರತೆಗೆಯಲು ವೈದ್ಯರು ನಿರ್ಧರಿಸಿದ್ದಾರೆ ಎಂದು ಕಾನ್ಪುರ್ ಉಪ ಐಜಿ ಪ್ರೀತಿಂದರ್ ಸಿಂಗ್ ಹೇಳಿದ್ದಾರೆ.
ಬಾಲಕಿ ಇನ್ನೂ ಪೊಲೀಸರೊಂದಿಗೆ ಮಾತನಾಡಲು ಮತ್ತು ಘಟನೆಯ ಬಗ್ಗೆ ಮಾಹಿತಿ ನೀಡುವ ಸ್ಥಿತಿಯಲ್ಲಿಲ್ಲ ಎಂದು ಡಿಐಜಿ ತಿಳಿಸಿದ್ದಾರೆ.
ವೈದ್ಯರು ಬಾಲಕಿಯ ಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದರು.
ಇಬ್ಬರು ಬಾಲಕಿಯ ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹಗಳಲ್ಲಿ ವಿಷದ ಅಂಶವಿದ್ದುದಾಗಿ ವೈದ್ಯರು ತಿಳಿಸಿದ್ದರು.
ಇನ್ನು ಪ್ರಕರಣ ನಡೆದ ಒಂದೇ ದಿನದಲ್ಲಿ ಪೊಲೀಸರು ಸಾವಿನ ಹಿಂದಿನ ರಹಸ್ಯ ಬೇಧಿಸಿದ್ದಾರೆ. ಆರೋಪಿ ವಿನಯ್ ಅಲಿಯಾಸ್ ಲಂಬು(18) ಹಾಗೂ ಮತ್ತೊಬ್ಬ ಅಪ್ರಾಪ್ತ ಆರೋಪಿಯನ್ನು ಬಂಧಿಸಿದ್ದಾರೆ. ತಾನೇ ವಿಷ ಹಾಕಿ ಕೊಂದಿದ್ದು ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.