ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಢ, ಮಧ್ಯ ಪ್ರದೇಶದಲ್ಲಿ ಕೊರೋನಾ ಮತ್ತೆ ಹೆಚ್ಚಳ: ಕೇಂದ್ರ
ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ವರದಿಯಾಗುತ್ತಿರುವ ದೈನಂದಿನ ಹೊಸ ಕೋವಿಡ್ -19 ಪ್ರಕರಣಗಳ ಸಂಖ್ಯೆ ಮತ್ತೆ "ಏರಿಕೆ"ಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
Published: 20th February 2021 03:06 PM | Last Updated: 20th February 2021 03:06 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ವರದಿಯಾಗುತ್ತಿರುವ ದೈನಂದಿನ ಹೊಸ ಕೋವಿಡ್ -19 ಪ್ರಕರಣಗಳ ಸಂಖ್ಯೆ ಮತ್ತೆ "ಏರಿಕೆ"ಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಕಳೆದ ಏಳು ದಿನಗಳಲ್ಲಿ ಛತ್ತೀಸ್ಗಢದಲ್ಲಿ ದೈನಂದಿನ ಹೊಸ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಛತ್ತೀಸ್ಗಢದಲ್ಲಿ ಕಳೆದ 24 ಗಂಟೆಗಳಲ್ಲಿ 259 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಹೇಳಿದೆ.
ಕೇರಳದಲ್ಲೂ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ವಾರ, ಮಹಾರಾಷ್ಟ್ರ ಸಹ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ದೇಶದಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಲು ಕಾರಣವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 6,112 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಹೇಳಿದೆ.
ಮಹಾರಾಷ್ಟ್ರದಂತೆಯೇ, ಪಂಜಾಬ್ ನಲ್ಲಿಯೂ ಕಳೆದ ಏಳು ದಿನಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 383 ಹೊಸ ಪ್ರಕರಣಗಳು ದಾಖಲಾಗಿವೆ.