ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದಿದ್ದ ಆರೋಪಿಗೆ ಮರಣ ದಂಡನೆ ಶಿಕ್ಷೆ!
9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ , ಕೊಲೆಗೈದಿದ್ದ ಆರೋಪಿಗೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯವೊಂದು ಮರಣ ದಂಡನೆ ಶಿಕ್ಷೆಯನ್ನು ಶನಿವಾರ ಪ್ರಕಟಿಸಿದೆ. ಕೇಸ್ ದಾಖಲಾದ ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ನ್ಯಾಯಾಲಯ ಈ ಮಹತ್ವದ ಶಿಕ್ಷೆ ಪ್ರಕಟಿಸಿದೆ.
Published: 21st February 2021 01:20 PM | Last Updated: 21st February 2021 01:20 PM | A+A A-

ಸಾಂದರ್ಭಿಕ ಚಿತ್ರ
ಪಾಟ್ನಾ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ , ಕೊಲೆಗೈದಿದ್ದ ಆರೋಪಿಗೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯವೊಂದು ಮರಣ ದಂಡನೆ ಶಿಕ್ಷೆಯನ್ನು ಶನಿವಾರ ಪ್ರಕಟಿಸಿದೆ. ಕೇಸ್ ದಾಖಲಾದ ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ನ್ಯಾಯಾಲಯ ಈ ಮಹತ್ವದ ಶಿಕ್ಷೆ ಪ್ರಕಟಿಸಿದೆ.
ಪಾಟ್ನಾದಿಂದ 140 ಕಿ.ಮೀ. ದೂರದಲ್ಲಿರುವ ಬಾಕ್ರೌರು ಹಳ್ಳಿಯಲ್ಲಿನ ಪ್ರಮುಖ ಶಂಕಿತನ ಮನೆಯಿಂದ ಬ್ಯಾಂಗ್ ವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೃತದೇಹವನ್ನು ಆಗಸ್ಟ್ 25 ರಂದು ಗೋಪಾಲ್ ಗಂಜ್ ನ ಸಿದ್ ವಾಲಿಯಾ ಪೊಲೀಸರು ವಶ ಪಡಿಸಿಕೊಂಡಿದ್ದರು.
ಬಾಲಕಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡ ನಂತರ ಆರೋಪಿ ಜಾಯ್ ಕಿಶೋರ್ ಶಾ, ಹಳ್ಳಿಯಿಂದ ತಲೆಮರೆಸಿಕೊಂಡಿದ್ದ. ನೆರೆ ಮನೆಗೆ ಆಟವಾಡಲು ಹೋಗಿದ್ದ ಸಂತ್ರಸ್ತೆ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದ. ನಂತರ ಪೋಷಕರು ಗ್ರಾಮಸ್ಥರೊಂದಿಗೆ ಹುಡುಕಾಟ ನಡೆಸುತ್ತಿದ್ದಾಗ ಮುಚ್ಚಲ್ಪಟ್ಟಿದ್ದ ಶಾ ಮನೆಯಿಂದ ಕೆಟ್ಟ ವಾಸನೆ ಬಂದಿದೆ. ನಂತರ ಶಾ ಮನೆಯನ್ನು ಮುರಿದು ನೋಡಿದಾಗ ರಕ್ತದ ಮಡುವಿನಲ್ಲಿ ಸ್ಟೀಲ್ ಬಾಕ್ಸ್ ವೊಂದರಲ್ಲಿ ಬಾಲಕಿಯ ಮೃತ ದೇಹ ಪತ್ತೆಯಾಗಿತ್ತು. ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಮದ್ಯವ್ಯಸನಿಯಾಗಿದ್ದ ಆರೋಪಿಯ ವಿರುದ್ಧ ಸಂಬಂಧಿತ ಐಪಿಸಿ ಸೆಕ್ಷನ್ ಹಾಗೂ ಪೊಕ್ಸೊ ಕಾಯ್ದೆಯಡಿ ಎಫ್ ಐಆರ್ ದಾಖಲಿಸಲಾಗಿತ್ತು. ತ್ವರಿತಗತಿಯಲ್ಲಿ ವಿಚಾರಣೆಯನ್ನು ಪೊಲೀಸರು ಪೂರ್ಣಗೊಳಿಸಿದ್ದಾಗಿ ಎಡಿಜಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ. ಕಳೆದ ವರ್ಷವೊಂದರಲ್ಲಿ ಬಿಹಾರ ಪೊಲೀಸರು 1,330 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದಾರೆ.