ಮೆಟ್ರೋ ಮ್ಯಾನ್ ಶ್ರೀಧರನ್ ನಂತರ ಪಿ.ಟಿ. ಉಷಾ ಬಿಜೆಪಿಗೆ ಸೇರ್ಪಡೆ?
ದೇವಭೂಮಿ ಕೇರಳದಲ್ಲಿ ಚುನಾವಣಾ ಬಿಸಿ ತೀವ್ರಗೊಳ್ಳುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ದಕ್ಷಿಣದ ಈ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಬಿಜೆಪಿ ಗುರಿಯಾಗಿಸಿಕೊಂಡಂತೆ ಕಂಡುಬರುತ್ತಿದೆ.
Published: 22nd February 2021 12:58 PM | Last Updated: 22nd February 2021 12:58 PM | A+A A-

ಪಿ.ಟಿ ಉಷಾ
ತಿರುವನಂತಪುರಂ: ದೇವಭೂಮಿ ಕೇರಳದಲ್ಲಿ ಚುನಾವಣಾ ಬಿಸಿ ತೀವ್ರಗೊಳ್ಳುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ದಕ್ಷಿಣದ ಈ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಬಿಜೆಪಿ ಗುರಿಯಾಗಿಸಿಕೊಂಡಂತೆ ಕಂಡುಬರುತ್ತಿದೆ.
ಇದಕ್ಕಾಗಿ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಚುನಾವಣಾ ಅಖಾಡಕ್ಕೆ ಇಳಿಸಲು ಆಲೋಚಿಸುತ್ತಿದೆ. ಈಗಾಗಲೇ 'ಮೆಟ್ರೊಮ್ಯಾನ್' ಖ್ಯಾತಿ ಇ. ಶ್ರೀಧರನ್ ಬಿಜೆಪಿ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ. ಈ ನಡುವೆ ಮಾಜಿ ಅಥ್ಲೀಟ್ ಪಿ.ಟಿ. ಉಷಾ ಅವರೂ ಕೂಡ ಕೇಸರಿ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮಾಜಿ ಅಥ್ಲೀಟ್ ಪಿಟಿ ಉಷಾ ಕಳೆದ ಕೆಲ ಸಮಯದಿಂದ ಕೃಷಿ ಕಾಯ್ದೆಗಳ ಬಗ್ಗೆ ಕೇಂದ್ರ ಸರ್ಕಾರ, ಬಿಜೆಪಿಯನ್ನು ಬೆಂಬಲಿಸುತ್ತಿರುವುದು ಇಲ್ಲಿ ಮಹತ್ವಪಡೆದುಕೊಂಡಿದೆ. ಇತ್ತೀಚಿಗೆ ಕೆಲ ಅಂತರಾಷ್ಟ್ರೀಯ ಸೆಲೆಬ್ರೆಟಿಗಳು ಪ್ರತಿಭಟನಾ ನಿರತ ರೈತರಿಗೆ ಬೆಂಬಲವಾಗಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದ ಪಿಟಿ ಉಷಾ ಅವರು ಕೇಂದ್ರ ಸರ್ಕಾರದ ಬಗ್ಗೆ ಸಕಾರಾತ್ಮಕವಾಗಿ ಟ್ವೀಟ್ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಉಷಾ ಅವರ ಆಪ್ತ ಮೂಲಗಳು ನಿರಾಕರಿಸಿವೆ.
ವಾಮಪಕ್ಷ ಆಡಳಿತದ ಕೇರಳದಲ್ಲಿ ಹಿಡಿತ ಸಾಧಿಸಲು ಬಿಜೆಪಿ ಕಳೆದ ಕೆಲ ವರ್ಷಗಳಿಂದ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ಕ್ರಮವಾಗಿ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಒಲವು ತೋರಿದ ಕೇಸರಿ ಪಕ್ಷ , ಈಗ ಸೆಲೆಬ್ರಿಟಿಗಳ ಮೂಲಕ ನಗರ ಮತದಾರರನ್ನು ಸೆಳೆಯಲು ಮುಂದಾಗಿದೆ. ಇ. ಶ್ರೀಧರನ್, ಪಿ.ಟಿ. ಉಷಾ ಅವರೊಂದಿಗೆ ಇನ್ನೂ ಕೆಲವು ಸಿನಿಮಾ ಪ್ರಮುಖರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ಅತ್ತ ಕಾಂಗ್ರೆಸ್ ಕೂಡ ಕೇರಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆ ಪಕ್ಷದ ನಾಯಕ ರಾಹುಲ್ ಗಾಂಧಿ ಕೇರಳದಿಂದ ಲೋಕಸಭೆಗೆ ಆಯ್ಕೆಗೊಂಡಿದ್ದಾರೆ. ಇದರೊಂದಿಗೆ ಮುಂಬರುವ ಚುನಾವಣೆಯಲ್ಲಿ ಏನಾದರೂ ಮಾಡಿ ಗೆಲುವು ಸಾಧಿಸಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆಂಬ ದೃಢನಿಶ್ಚಯ ಹೊಂದಿದ್ದಾರೆ.