ಎಲ್ಗಾರ್ ಪರಿಷತ್ ಪ್ರಕರಣ: ಆರೋಗ್ಯದ ನೆಲೆಗಟ್ಟಿನಲ್ಲಿ ವರವರ ರಾವ್ ಗೆ ಮಧ್ಯಂತರ ಜಾಮೀನು
ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ತೆಲುಗು ಸಾಮಾಜಿಕ ಹೋರಾಟಗಾರ ಹಾಗೂ ಲೇಖಕ ವರವರ ರಾವ್ ಅವರಿಗೆ ಬಾಂಬೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
Published: 22nd February 2021 12:24 PM | Last Updated: 22nd February 2021 01:21 PM | A+A A-

ವರವರ ರಾವ್
ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ತೆಲುಗು ಸಾಮಾಜಿಕ ಹೋರಾಟಗಾರ ಹಾಗೂ ಲೇಖಕ ವರವರ ರಾವ್ ಅವರಿಗೆ ಬಾಂಬೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ವರವರ ರಾವ್ ಅವರ ಆರೋಗ್ಯ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಾಂಬೇ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದ್ದು, ಮುಂಬೈನಲ್ಲೇ ಇರುವಂತೆ ಮತ್ತು ತನಿಖೆಗೆ ಲಭ್ಯರಿರುವಂತೆ ಸೂಚಿಸಿದೆ. ಅಂತೆಯೇ 50 ಸಾವಿರ ರೂ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಜಾಮೀನುದಾರರು ಅಷ್ಟೇ ಮೊತ್ತದ ಬಾಂಡ್ ನೀಡಬೇಕು. ಅಲ್ಲದೆ ಪಾಸ್ಪೋರ್ಟ್ ಅನ್ನು ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಪ್ರಕರಣದಲ್ಲಿ ತನ್ನ ಸಹ-ಆರೋಪಿಗಳೊಂದಿಗೆ ಯಾವುದೇ ಸಂಪರ್ಕ ಹೊಂದುವಂತಿಲ್ಲ ಎಂಬ ಕಠಿಣ ಷರತ್ತುಗಳನ್ನು ವಿಧಿಸಿದೆ.
ಇನ್ನು ವರವರ ರಾವ್ ಅವರ ಆರೋಗ್ಯದ ದೃಷ್ಟಿ ಹಿನ್ನಲೆಯಲ್ಲಿಅವರಿಗೆ 6 ತಿಂಗಳ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಲಾಗಿತ್ತು. ಹೈಕೋರ್ಟ್ ಫೆಬ್ರವರಿ 1ರಂದು ಈ ಪ್ರಕರಣದ ಎಲ್ಲ ವಾದಗಳನ್ನು ಮುಕ್ತಾಯಗೊಳಿಸಿತು. ರಾವ್ ಅವರ ವೈದ್ಯಕೀಯ ಜಾಮೀನು ಅರ್ಜಿಯ ವಿಚಾರಣೆ ಮತ್ತು ಅವರ ಪತ್ನಿ ಹೆಮ್ಲತ್ ಅವರ ರಿಟ್ ಅರ್ಜಿಯ ಪರಿಶೀಲನೆ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಪೊಲೀಸರು, ಮಾವೊವಾದಿ ಸಂಪರ್ಕ ಹೊಂದಿರುವ ಜನರು ಈ ಸಮಾವೇಶವನ್ನು ಆಯೋಜಿಸಿದ್ದಾರೆ ಎಂದು ಆರೋಪಿಸಿದ್ದರು.
ಎಲ್ಗಾರ್ ಪರಿಷದ್ ಪ್ರಕರಣ ಹಾಗೂ ಮಾವೊವಾದಿಗಳ ಜೊತೆ ನಂಟು ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆಗಸ್ಟ್ 28, 2018ರಂದು ವರವರ ರಾವ್(82) ಅವರನ್ನು ಬಂಧಿಸಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ರಾವ್ ಅವರಿಗೆ ಮಹಾರಾಷ್ಟ್ರ ಹೈ ಕೋರ್ಟ್ನ ಸೂಚನೆಯಂತೆ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ನ್ಯಾಯಪೀಠ, ರಾವ್ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆಂದು ಆದೇಶಿಸಿತು. ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ರಾವ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.