'ಕೆಲಸ ಹೆಚ್ಚಿಸಲೇಬೇಕಾಯ್ತು!': ಮನ್ರೇಗಾ ಯೋಜನೆಯನ್ನು ಮೂದಲಿಸಿದ್ದ ಪ್ರಧಾನಿಗೆ ರಾಹುಲ್ ಗಾಂಧಿ
ಸಂಸತ್ ನಲ್ಲಿ ಮನ್ರೇಗಾ ಯೋಜನೆಯನ್ನು ಮೂದಲಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಜಾರಿಗೆ ತಂದಿದ್ದ ಯೋಜನೆ ಕೋವಿಡ್-19 ಪ್ಯಾಂಡಮಿಕ್ ಅವಧಿಯಲ್ಲಿ ದೇಶದ ಜನತೆಯ ರಕ್ಷಣೆಗೆ ಸಹಕಾರಿಯಾಗಿದ್ದನ್ನು ಒಪ್ಪಲೇಬೇಕಾಯ್ತು ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
Published: 22nd February 2021 04:35 PM | Last Updated: 22nd February 2021 07:25 PM | A+A A-

ರಾಹುಲ್ ಗಾಂಧಿ
ವಯನಾಡ್: ಸಂಸತ್ ನಲ್ಲಿ ಮನ್ರೇಗಾ ಯೋಜನೆಯನ್ನು ಮೂದಲಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಜಾರಿಗೆ ತಂದಿದ್ದ ಯೋಜನೆ ಕೋವಿಡ್-19 ಪ್ಯಾಂಡಮಿಕ್ ಅವಧಿಯಲ್ಲಿ ದೇಶದ ಜನತೆಯ ರಕ್ಷಣೆಗೆ ಸಹಕಾರಿಯಾಗಿದ್ದನ್ನು ಒಪ್ಪಲೇಬೇಕಾಯ್ತು ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಪೂಥಡಿ ಗ್ರಾಮ ಪಂಚಾಯತ್ ನಲ್ಲಿ ಕುಟುಂಬಶ್ರೀ ಸಂಗಮಮ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ರಾಹುಲ್ ಗಾಂಧಿ, ಬಡತನದಲ್ಲಿರುವವರ ಸಬಲೀಕರಣಕ್ಕೆ ಕಾಂಗ್ರೆಸ್ ಶ್ರಮಿಸಿದರೆ ಬಿಜೆಪಿ ಬಲಿಷ್ಠರ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ಆರೋಪಿಸಿದ್ದಾರೆ.
"ಮೋದಿ ಮೊದಲ ಬಾರಿಗೆ ಪ್ರಧಾನಿಯಾದಾಗ ಸಂಸತ್ ನಲ್ಲಿ ನಮ್ಮೆಲ್ಲರೆದುರು ಮನ್ರೇಗಾ ಯೋಜನೆಯನ್ನು ಮೂದಲಿಸಿ, ಈ ಯೋಜನೆ ಸಮಸ್ತ ಭಾರತೀಯರಿಗೆ ಅವಮಾನ ಉಂಟುಮಾಡುವ ಯೋಜನೆ ಎಂದು ಹೇಳಿದ್ದರು. ಆದರೆ ಕೊರೋನಾ ಅವಧಿಯಲ್ಲಿ ಯೋಜನೆಗೆ ನೀಡುತ್ತಿದ್ದ ಅನುದಾನ ಹಾಗೂ ಯೋಜನೆಯಡಿಯ ಕೆಲಸಗಳನ್ನು ಪ್ರಧಾನಿಗಳು ಹೆಚ್ಚಿಸಲೇಬೇಕಾಯ್ತು, ಈ ಮೂಲಕ ಯುಪಿಎ ಜಾರಿಗೆ ತಂದಿದ್ದ ಮನ್ರೇಗಾ ಕೋವಿಡ್-19 ನಂತಹ ಸಂಕಷ್ಟದ ಸ್ಥಿತಿಯಲ್ಲಿ ಬಡವರ ರಕ್ಷಣೆಗೆ ನೆರವಾಯಿತು ಎಂಬುದನ್ನು ಒಪ್ಪಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೋವಿಡ್-19 ಸಂದರ್ಭದಲ್ಲಿ ಉದ್ಯೋಗ ಖಾತ್ರಿ ವೇತನ ನೀಡುವ ಮನ್ರೇಗಾ ಅಡಿಯಲ್ಲಿ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳು ಲಭ್ಯವಿದ್ದವು. ಎಸ್ ಹೆಚ್ ಜಿ ಹಾಗೂ ಮನ್ರೇಗಾ ಯೋಜನೆಗಳನ್ನು ಯುಪಿಎ ಜನತೆಗೆ ಉಡುಗೊರೆ ಎಂದು ನೀಡಲಿಲ್ಲ. ಆದರೆ ಜನರ ಸಬಲೀಕರಣಕ್ಕೆ ಉಪಕರಣಗಳನ್ನಾಗಿ ಬಳಕೆ ಮಾಡಿಕೊಂಡಿತ್ತು ಎಂದು ಹೇಳಿದ್ದಾರೆ.
100 ದಿನಗಳ ವೇತನ ಸಹಿತ ಉದ್ಯೋಗ ಖಾತ್ರಿಯನ್ನು ನೀಡುತ್ತಿದ್ದ ಮನ್ರೇಗಾ ಯೋಜನೆಯನ್ನು ಹಲವರು ಪ್ರಶ್ನಿಸಿದ್ದರು. ದಾನ ಮಾಡಿ ಯಾಕೆ ಜನರನ್ನು ಹಾಳು ಮಾಡುತ್ತೀರ ಎಂಬ ಪ್ರಶ್ನೆಗಳು ಬಂದಿತ್ತು. ಯಾರು ಈ ಯೋಜನೆಯನ್ನು ಮೂದಲಿಸಿದ್ದರೋ ಅವರು ಈಗ ಸರ್ಕಾರ ದೊಡ್ಡ ಉದ್ಯಮಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದರೂ ಸಹ ಏನನ್ನೂ ಮಾತನಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.