Source : ANI
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಾದರೆ ಖಂಡಿತಾ ಲಾಕ್ ಡೌನ್ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮತ್ತೆ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಉಲ್ಪಣವಾಗುತ್ತಿದ್ದು, ಇದು ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂದಿನ 8 ರಿಂದ 15 ದಿನಗಳ ಕಾಲ ಹೊಸ ಸೋಂಕು ಪ್ರಕರಣಗಳು ಹೀಗೆಯೇ ಮುಂದುವರಿದರೆ ಲಾಕ್ಡೌನ್ ಘೋಷಣೆ ಮಾಡುವ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಉದ್ಧವ್ ಅಭಿಪ್ರಾಯಪಟ್ಟಿದ್ದಾರೆ.
ಲಾಕ್ ಡೌನ್ ಹೇರುವ ಕುರಿತು ನಡೆದ ಸಭೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, 'ಮಹಾರಾಷ್ಟ್ರದ ಕೊವಿಡ್ ಪರಿಸ್ಥಿತಿ ಗಂಭೀರವಾಗಿದೆ. ದೈನಂದಿನ ಅಂಕಿ ಅಂಶಗಳ ಪ್ರಸ್ತುತ ಏರಿಕೆ ಆತಂಕ ಮೂಡಿಸಿದೆ. ಇದು ಸೋಂಕಿನ ಹೊಸ ಅಲೆಯೇ ಎಂದು ಕಂಡುಹಿಡಿಯಲು ಒಂದೆರಡು ವಾರಗಳು ಬೇಕು. ಮತ್ತೊಂದು ಲಾಕ್ಡೌನ್ ತಪ್ಪಿಸಲು ಜನರು ಕೊರೊನಾ ವೈರಸ್ ನಿಯಂತ್ರಣ ಶಿಷ್ಟಾಚಾರಗಳನ್ನು ಅನುಸರಿಸಬೇಕೆಂದು ಅವರು ಎಚ್ಚರಿಸಿದರು.
ನಮಗೆ ಲಾಕ್ಡೌನ್ ಅಗತ್ಯವಿದೆಯೇ? ನೀವು ಜವಾಬ್ದಾರಿಯುತವಾಗಿ ವರ್ತಿಸಿ. ಮುಂದಿನ ಎಂಟು ದಿನಗಳಲ್ಲಿ ಪರಿಸ್ಥಿತಿ ಸ್ಪಷ್ಟವಾಗುತ್ತದೆ. ಲಾಕ್ಡೌನ್ ಬೇಡದವರು ಮಾಸ್ಕ್ ಧರಿಸುತ್ತಾರೆ. ಲಾಕ್ಡೌನ್ ಬಯಸುವವರು ಮಾಸ್ಕ್ ಧರಿಸುವುದಿಲ್ಲ. ಮಾಸ್ಕ್ ಧರಿಸಿ, ಲಾಕ್ಡೌನ್ ಬೇಡವಂದು ಹೇಳಿ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಈ ಮೊದಲು 2,000-2,500 ಪ್ರಕರಣಗಳು ವರದಿ ಆಗುತ್ತಿದ್ದವು. ಈಗ, ಇದು ಸುಮಾರು 7,000ಕ್ಕೆ ಏರಿಕೆ ಆಗಿದೆ. ಸಕ್ರಿಯ ಪ್ರಕರಣಗಳು 40,000 ದಿಂದ 53,000ಕ್ಕೆ ಏರಿದೆ ಎಂದು ಉದ್ಧವ್ ಹೇಳಿದರು.
ಇನ್ನು ದೇಶದ ಎಲ್ಲ ಭಾಗಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗಿದ್ದರೂ ಮಹಾರಾಷ್ಟ್ರದಲ್ಲಿ ಮಾತ್ರ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಕಡಿಮೆ ಆಗಿರಲಿಲ್ಲ. ಕಳೆದ ವಾರ 6 ಸಾವಿರ ಇದ್ದ ನಿತ್ಯ ಹೊಸ ಪ್ರಕರಣಗಳ ಸಂಖ್ಯೆ, ಈಗ 7 ಸಾವಿರಕ್ಕೆ ಏರಿಕೆ ಆಗಿದೆ. ಭಾನುವಾರ ಕೂಡ 6,971 ಪ್ರಕರಣ ವರದಿಯಾಗಿದ್ದು, 35 ಸಾವು ಸಂಭವಿಸಿದೆ.
ಇದೇ ವಿಚಾರವಾಗಿ ಮಾತನಾಡಿದ್ದ ಮುಂಬೈ ಮೇಯರ್ ಕಿಶೋರಿ ಪಡ್ನೇಕರ್, ಕೊರೊನಾ ಸೋಂಕು ನಿಯಂತ್ರಣಕ್ಕೆ ಸಾಕಷ್ಟು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ. ಕೊವಿಡ್ ನಿಯಮದನ್ವಯ, ಮಾಸ್ಕ್ ಹಾಕುವುದು ಕಡ್ಡಾಯವಾದರೆ, ಗುಂಪು ಸೇರುವುದರ ಮೇಲೆ ನಿಷೇಧ ಹೇರಲಾಗಿದೆ. ಆದಾಗ್ಯೂ, ಜನರು ನಿಯಮವನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ, ಕಟ್ಟುನಿಟ್ಟಾಗಿ ಕೊರೊನಾ ನಿಯಮ ಪಾಲನೆ ಸೂಚಿಸಲಾಗಿದೆ. ನೀವು ಕೊವಿಡ್ ನಿಯಮ ಪಾಲನೆ ಮಾಡದೆ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ಲಾಕ್ಡೌನ್ ಘೋಷಣೆ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ನೀವು ನಿಯಮ ಪಾಲನೆ ಮಾಡಿ ಎಂದು ಹೇಳಿದ್ದರು.