ಕೋವಿಡ್-19 ಲಸಿಕೆ ಪಡೆದಿದ್ದ ಚಿಕ್ಕಬಳ್ಳಾಪುರ ವ್ಯಕ್ತಿ ಮೃತಪಟ್ಟಿದ್ದು ಹೃದಯ ಸಮಸ್ಯೆಯಿಂದ: ಜಯದೇವ ನಿರ್ದೇಶಕ
ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರು ಕೋವಿಡ್-19 ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದರು. ಕೋವಿಡ್-19 ಲಸಿಕೆ ಪಡೆದ ನಂತರ ಮೃತಪಟ್ಟ 4 ನೇ ವ್ಯಕ್ತಿ ಇವರಾಗಿದ್ದರಿಂದ ಸಹಜವಾಗಿಯೇ ಲಸಿಕೆ ಕುರಿತ ಆತಂಕ ಹೆಚ್ಚಾಗಿತ್ತು.
Published: 23rd February 2021 02:53 PM | Last Updated: 23rd February 2021 02:57 PM | A+A A-

ಕೋವಿಡ್-19 ಲಸಿಕೆ ಅಭಿಯಾನ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರು ಕೋವಿಡ್-19 ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದರು. ಕೋವಿಡ್-19 ಲಸಿಕೆ ಪಡೆದ ನಂತರ ಮೃತಪಟ್ಟ 4 ನೇ ವ್ಯಕ್ತಿ ಇವರಾಗಿದ್ದರಿಂದ ಸಹಜವಾಗಿಯೇ ಲಸಿಕೆ ಕುರಿತ ಆತಂಕ ಹೆಚ್ಚಾಗಿತ್ತು.
ಆದರೆ ಇತ್ತೀಚೆಗೆ ಸಂಭವಿಸಿದ ಘಟನೆಯಲ್ಲಿ ವ್ಯಕ್ತಿಯ ಸಾವಿಗೆ ಕೋವಿಡ್-19 ಲಸಿಕೆ ಕಾರಣವಲ್ಲ ಎಂದು ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ನ ನಿರ್ದೇಶಕ ಡಾ. ಸಿ. ಎನ್ ಮಂಜುನಾಥ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಜಲಸಂಪನ್ಮೂಲ ಇಲಾಖೆ ಇಲಾಖೆಯಲ್ಲಿ ವಾಲ್ವ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ 56 ವರ್ಷದ ವ್ಯಕ್ತಿಗೆ ಫೆ.19 ರಂದು ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಆತ ಮೃತಪಟ್ಟಿದ್ದರು. ಫೆ.10 ರಂದು ಕೋವಿಡ್-19 ಗೆ ಕೋವಿಶೀಲ್ಡ್ ಲಸಿಕೆಯನ್ನು ಪಡೆದ ನಂತರ ಈ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಫೆ.18 ರಂದು ಜಯದೇವಾಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
"ರೋಗಿಗೆ ಆರೋಗ್ಯದ ಹಲವು ಸಮಸ್ಯೆಗಳಿತ್ತು. ಫೆ.10 ರಂದು ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿದ್ದರು. ರಕ್ತ ಹೆಪ್ಪುಗಟ್ಟಿರುವುದನ್ನು ಕರಗಿಸುವುದಕ್ಕಾಗಿ ಔಷಧವನ್ನು ನೀಡಿ, ಆಂಜಿಯೋಗ್ರಾಮ್ ಕೂಡ ಮಾಡಲಾಗಿತ್ತು. ಬಳಿಕ ಜಯದೇವ ಆಸ್ಪತ್ರೆಯಲ್ಲಿ ECHO ಪರೀಕ್ಷೆಗೊಳಪಡಿಸಿದಾಗ ಹೃದಯ ಕಡಿಮೆ ಕೆಲಸ ಮಾಡುತ್ತಿರುವುದು ಕಂಡುಬಂದಿತ್ತು. ಅಷ್ಟೇ ಅಲ್ಲದೇ severe aortic stenosis ಸಮಸ್ಯೆ ಇರುವುದೂ ಸಹ ಬೆಳಕಿಗೆ ಬಂದಿತ್ತು ಎಂದು ಡಾ. ಮಂಜುನಾಥ್ ಹೇಳಿದ್ದಾರೆ.
ಇದು ಅತಿ ಅಪಾಯದ ಪ್ರಕರಣವಾಗಿದ್ದರಿಂದ ಸರ್ಜರಿ ಮಾಡುವಂತಿರಲಿಲ್ಲ. ಶೇ.100 ರಷ್ಟು ಇದು ಕೋವಿಡ್-19 ಲಸಿಕೆಯ ಕಾರಣದಿಂದಾಗಿ ಉಂಟಾಗಿದ್ದಲ್ಲ ಎಂದು ಅವರು ಹೇಳಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಮಧುಮೇಹ ಇತ್ತು. ಆದರೆ ಇದು ಆತನಿಗೆ ತಿಳಿದಿರಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಶೇ.62 ರಷ್ಟು ಕೊರೋನಾ ಲಸಿಕೆ
ಇದೇ ವೇಳೆ ರಾಜ್ಯದಲ್ಲಿ ಶೇ.62 ರಷ್ಟು ಕೊರೋನಾ ಲಸಿಕೆಯನ್ನು ನೀಡಲಾಗಿದೆ. 11 ಲಕ್ಷ ಆರೋಗ್ಯ ಹಾಗೂ ಮುನ್ನೆಲೆ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದ್ದು ಎರಡೂ ಡೋಸ್ ಗಳನ್ನು ಪೂರ್ಣಗೊಳಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು (ಶೇ.79 ರಷ್ಟು) ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ ನಂತರದ ಸ್ಥಾನದಲ್ಲಿ ಶೇ.76 ರಷ್ಟು ಲಸಿಕೆ ಪಡೆದಿರುವ ಚಿಕ್ಕಮಗಳೂರು ಜಿಲ್ಲೆ ಇದೆ.