ಕೆಂಪು ಕೋಟೆ ಹಿಂಸಾಚಾರ: ದೀಪು ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ
ಗಣರಾಜ್ಯೋತ್ಸವ ದಿನದಂದು ರೈತರ ಪ್ರತಿಭಟನೆ ವೇಳೆಯಲ್ಲಿ ನಡೆದ ಕೆಂಪು ಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಟ- ಹೋರಾಟಗಾರ ದೀಪು ಸಿಧುವನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವೊಂದು ಮಂಗಳವಾರ ಆದೇಶಿಸಿದೆ.
Published: 23rd February 2021 07:16 PM | Last Updated: 23rd February 2021 07:35 PM | A+A A-

ನಟ- ಹೋರಾಟಗಾರ ದೀಪು ಸಿಧು
ನವದೆಹಲಿ: ಗಣರಾಜ್ಯೋತ್ಸವ ದಿನದಂದು ರೈತರ ಪ್ರತಿಭಟನೆ ವೇಳೆಯಲ್ಲಿ ನಡೆದ ಕೆಂಪು ಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಟ- ಹೋರಾಟಗಾರ ದೀಪು ಸಿಧುವನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವೊಂದು ಮಂಗಳವಾರ ಆದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಸಿಧುವನ್ನು ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ಜೀತ್ ಕೌರ್ ಮುಂದೆ ಇಂದು ಹಾಜರುಪಡಿಸಲಾಯಿತು.
ಕೆಂಪುಕೋಟೆ ಬಳಿಯ ಹಿಂಸಾಚಾರಕ್ಕೆ ಪ್ರಮುಖ ಪಿತೂರಿಗಾರರಲ್ಲಿ ದೀಪು ಸಿಧು ಕೂಡಾ ಒಬ್ಬ ಎಂದು ಈ ಹಿಂದೆ ಪೊಲೀಸರು ಆರೋಪಿಸಿದ ನಂತರ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ರದ್ಧತಿಗೆ ಒತ್ತಾಯಿಸಿ ಜನವರಿ 26 ರಂದು ರೈತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸುತ್ತಿದ್ದ ವೇಳೆಯಲ್ಲಿ ಪೊಲೀಸರು ಹಾಗೂ ಪ್ರತಿಭಟನಾ ನಿರತ ಸಹಸ್ರಾರು ರೈತರ ನಡುವೆ ಸಂಘರ್ಘ ಭುಗಿಲೆದ್ದಿತ್ತು.
ಅನೇಕ ಉದ್ರಿಕ್ತರು ಕೆಂಪುಕೋಟೆಯವರೆಗೂ ಟ್ರ್ಯಾಕ್ಟರ್ ಚಾಲನೆ ಮಾಡಿ, ಧರ್ಮವೊಂದರ ಬಾವುಟವನ್ನು ಆರೋಹಣ ಮಾಡಿದ್ದರು. ಈ ವೇಳೆ ಪ್ರತಿಭಟನಾಕಾರನೊಬ್ಬ ಮೃತಪಟ್ಟು, ಸುಮಾರು 500 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಕೆಂಪು ಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.