ತೈಲ ದರ ಏರಿಕೆ ನಡುವೆ ರಿಲೀಫ್ ನೀಡಿದ ನಾಗಾಲ್ಯಾಂಡ್ ಸರ್ಕಾರ, ತೆರಿಗೆ ಕಡಿತ ಮಾಡಿದ 5ನೇ ರಾಜ್ಯ

ದೇಶಾದ್ಯಂತ ಇಂಧನ ದರ ಏರಿಕೆಯಿಂದಾಗಿ ಪ್ರಜೆಗಳು ಸಂಕಷ್ಟಕ್ಕೀಡಾಗಿರುವಂತೆಯೇ ಇತ್ತ ಈಶಾನ್ಯ ಭಾರತದ ನಾಗಾಲ್ಯಾಂಡ್ ಸರ್ಕಾರ ತೈಲೋತ್ಪನ್ನಗಳ ಮೇಲಿನ ತನ್ನ ಪಾಲಿನ ತೆರಿಗೆ ಕಡಿತ ಮಾಡಿದೆ.

Published: 23rd February 2021 12:20 PM  |   Last Updated: 23rd February 2021 12:20 PM   |  A+A-


Petrol prices

ಸಂಗ್ರಹ ಚಿತ್ರ

Posted By : Srinivasamurthy VN
Source : ANI

ಕೊಹಿಮಾ: ದೇಶಾದ್ಯಂತ ಇಂಧನ ದರ ಏರಿಕೆಯಿಂದಾಗಿ ಪ್ರಜೆಗಳು ಸಂಕಷ್ಟಕ್ಕೀಡಾಗಿರುವಂತೆಯೇ ಇತ್ತ ಈಶಾನ್ಯ ಭಾರತದ ನಾಗಾಲ್ಯಾಂಡ್ ಸರ್ಕಾರ ತೈಲೋತ್ಪನ್ನಗಳ ಮೇಲಿನ ತನ್ನ ಪಾಲಿನ ತೆರಿಗೆ ಕಡಿತ ಮಾಡಿದೆ.

ನಾಗಾಲ್ಯಾಂಡ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿದ್ದ ತೆರಿಗೆಯನ್ನು ಕಡಿತಗೊಳಿಸಲಾಗಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬರಲಿದೆ. ಮೂಲಗಳ ಪ್ರಕಾರ ನಾಗಾಲ್ಯಾಂಡ್ ತೈಲೋತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಶೇ.29.80ರಿಂದ ಶೇ.25ರಷ್ಟು ಇಳಿಸಿದೆ. ಅದರಂತೆ ಪೆಟ್ರೋಲ್ ದರದ ಮೇಲೆ ವಿಧಿಸಿದ್ದ ತೆರಿಗೆಯು 18.26 ರೂಪಾಯಿಯಿಂದ 16.04 ರೂಗೆ ಇಳಿಕೆಯಾಗಲಿದೆ ಎನ್ನಲಾಗಿದೆ. ಅಂತೆಯೇ ಡೀಸೆಲ್ ಮೇಲೆ ವಿಧಿಸುತ್ತಿದ್ದ ತೆರಿಗೆ ದರವನ್ನು ಇಳಿಕೆ ಮಾಡಲಾಗಿದ್ದು, ಡೀಸೆಲ್ ಮೇಲೆ ಶೇ.17.50ರ ಬದಲಿಗೆ ಶೇ.16.50ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಹಿನ್ನೆಲೆ ಡೀಸೆಲ್ ಮೇಲಿನ ತೆರಿಗೆ ದರವು 11.08 ರಿಂದ 10.51 ರೂಪಾಯಿಗೆ ಇಳಿಕೆಯಾಗಿದೆ.

ಪ್ರಸ್ತುತ ತೆರಿಗೆ ಕಡಿತ ಹಿನ್ನಲೆಯಲ್ಲಿ ನಾಗಾಲ್ಯಾಂಡ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಮೇಲೆ 2.22 ರೂಪಾಯಿ ಇಳಿಕೆಯಾದಂತಾಗಿದೆ. ಡೀಸೆಲ್ ದರದಲ್ಲಿ 57 ಪೈಸೆ ಇಳಿಸಲಾಗಿದೆ. ರಾಜ್ಯದ ದೀಮಾಪುರ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 92 ರೂಪಾಯಿ ಮತ್ತು ಡೀಸೆಲ್ ದರ 83 ರೂಪಾಯಿ ಇದೆ. ಕೋಹಿಮಾದಲ್ಲಿ ಒಂದು ಲೀಟರ್ ಪೆಟ್ರೋಲ್ ದರ 93 ರೂಪಾಯಿಯಿದ್ದು, ಡೀಸೆಲ್ ದರವು 84 ರೂಪಾಯಿ ಇದೆ. ರಾಜ್ಯದ ಪ್ರಯಾಣಿಕರಿಗೆ ಮತ್ತು ಸಾರಿಗೆ ವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಉದ್ದೇಶದಿಂದಾಗಿ ಭಾರತದ ನಾಲ್ಕು ರಾಜ್ಯಗಳಲ್ಲಿ ಇಂಧನ ಬೆಲೆಯ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ವಿನಾಯಿತಿ ನೀಡಲಾಗಿದೆ.

ತೈಲೋತ್ಪನ್ನಗಳ ಮೇಲಿನ ತೆರಿಗೆ ಇಳಿಕೆ ಮಾಡಿದ ಐದನೇ ರಾಜ್ಯ
ಇನ್ನು ನಾಗಾಲ್ಯಾಂಡ್ ತೈಲೋತ್ಪನ್ನಗಳ ಮೇಲಿನ ತೆರಿಗೆ ಇಳಿಕೆ ಮಾಡಿದ ಐದನೇ ರಾಜ್ಯವಾಗಿದ್ದು, ಈ ಹಿಂದೆ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಪಶ್ಚಿಮ ಬಂಗಾಳ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಪ್ರಮಾಣವನ್ನು ಪ್ರತಿ ಲೀಟರ್‌ಗೆ ಒಂದು ರೂಪಾಯಿಯಷ್ಟು ಇಳಿಸಿದೆ. ಜನವರಿ 29ರಂದು ರಾಜಸ್ಥಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ದರವನ್ನು 38%ದಿಂದ 36%ಕ್ಕೆ ಇಳಿಸಿ, ರಾಜ್ಯ ತೆರಿಗೆ ಇಳಿಸಿದ ಮೊದಲ ರಾಜ್ಯ ಎನಿಸಿಕೊಂಡಿತ್ತು.  ಚುನಾವಣೆಗೆ ಸಜ್ಜಾಗಿರುವ ಅಸ್ಸಾಂ ಕೂಡಾ ಕಳೆದ ವರ್ಷ ಕೋವಿಡ್-19 ವಿರುದ್ಧದ ಸಮರದ ಅಂಗವಾಗಿ ವಿಧಿಸಿದ್ದ 5 ರೂಪಾಯಿ ಹೆಚ್ಚುವರಿ ತೆರಿಗೆಯನ್ನು ಫೆಬ್ರುವರಿ 12ರಂದು ರದ್ದುಪಡಿಸಿತ್ತು. ಮೇಘಾಲಯವು ಪೆಟ್ರೋಲ್ ಮೇಲೆ 7.40 ರೂ. ಹಾಗು ಡೀಸೆಲ್ 7.10 ರೂ. ಕಡಿಮೆ ಮಾಡಿದೆ. ಪೆಟ್ರೋಲ್ ಮೇಲಿನ ವ್ಯಾಟ್ 31.62% ರಿಂದ 20% ಮತ್ತು ಡೀಸೆಲ್ ಮೇಲಿನ ವ್ಯಾಟ್ 22.95% ರಿಂದ 12% ಇಳಿಸಲಾಗಿತ್ತು.
 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp