
ಎನ್ ಸಿಪಿ
ಮುಂಬೈ: ಮಹಾರಾಷ್ಟ್ರದ ಸಂಗ್ಲಿ ಮಿರಾಜ್ ಕುಪ್ವಾಡ್ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯನ್ನು ಎನ್ ಸಿಪಿ ಗೆದ್ದಿದೆ.
ಈ ಹಿಂದೆ ಈ ಪಾಲಿಕೆಯ ಮೇಯರ್ ಹುದ್ದೆ ಬಿಜೆಪಿ ತೆಕ್ಕೆಯಲ್ಲಿತ್ತು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ 5 ಕಾರ್ಪೊರೇಟರ್ ಗಳು ಎನ್ ಸಿಪಿಯ ದಿಗ್ವಿಜಯ್ ಸೂರ್ಯವಂಶಿ ಪರವಾಗಿ ಮತ ಚಲಾಯಿಸಿರುವುದರಿಂದ ಬಿಜೆಪಿ ಸೋತಿದೆ.
78 ಸದಸ್ಯರಿರುವ ಪಾಲಿಕೆಯಲ್ಲಿ ಎನ್ ಸಿಪಿ ಅಭ್ಯರ್ಥಿ 39 ಮತಗಳನ್ನು ಪಡೆದರೆ, 36 ಮತಗಳನ್ನು ಬಿಜೆಪಿ ಅಭ್ಯರ್ಥಿ ಧೀರಜ್ ಸೂರ್ಯವಂಶಿ ಪಡೆದರು ಎಂದು ಎನ್ ಸಿಪಿಯ ಜಿಲ್ಲಾ ಅಧ್ಯಕ್ಷ ಸಂಜಯ್ ಬಜಾಜ್ ಹೇಳಿದ್ದಾರೆ.
ಕನಿಷ್ಟ ಐವರು ಬಿಜೆಪಿ ಕಾರ್ಪೊರೇಟರ್ ಗಳು ಎನ್ ಸಿಪಿ ಪರವಾಗಿ ಮತ ಚಲಾಯಿಸಿದ್ದರೆ, ಇಬ್ಬರು ಮತದಾನದಿಂದ ಹಿಂದೆಸರಿದಿದ್ದಾರೆ ಎಂದು ಬಜಾಜ್ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಪಾಲಿಕೆಯಲ್ಲಿ ಬಿಜೆಪಿ 43 ಸದಸ್ಯರನ್ನು ಹೊಂದಿತ್ತು ಎನ್ ಸಿಪಿ 34 ಸದಸ್ಯರನ್ನು ಹೊಂದಿತ್ತು. ಕೇವಲ 7 ಮತಗಳನ್ನು ನಿರ್ವಹಣೆ ಮಾಡುವ ಮೂಲಕ ಎನ್ ಸಿಪಿ ಮೇಯರ್ ಚುನಾವಣೆ ಗೆದ್ದಿದೆ. ಕಾಂಗ್ರೆಸ್ ನ ಉಮೇಶ್ ಪಾಟೀಲ್ ಉಪಮೇಯರ್ ಆಗಿ ಆಯ್ಕೆಗೊಂಡಿದ್ದಾರೆ.