ಮೂರು ವಿವಾದಾತ್ಮಕ ಕಾನೂನುಗಳ ಕುರಿತು ರೈತರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧ: ತೋಮರ್
ವಿವಾದಾತ್ಮಕ ಮೂರು ಕಾನೂನುಗಳನ್ನು ಒಂದೂವರೆ ವರ್ಷಗಳ ಕಾಲ ಸ್ಥಗಿತಗೊಳಿಸಲು ರೈತರ ಒಪ್ಪಿಕೊಂಡರೆ ಅವರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
Published: 24th February 2021 06:05 PM | Last Updated: 24th February 2021 07:29 PM | A+A A-

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ನವದೆಹಲಿ: ವಿವಾದಾತ್ಮಕ ಮೂರು ಕಾನೂನುಗಳನ್ನು ಒಂದೂವರೆ ವರ್ಷಗಳ ಕಾಲ ಸ್ಥಗಿತಗೊಳಿಸಲು ರೈತರ ಒಪ್ಪಿಕೊಂಡರೆ ಅವರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ಮತ್ತು ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕೃಷಿ ವಲಯವನ್ನು ಬಲಗೊಳಿಸಿ, ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ 40 ಲಕ್ಷ ಟ್ರ್ಯಾಕ್ಟರ್ ಗಳೊಂದಿಗೆ ಪಾರ್ಲಿಮೆಂಟ್ ಚಲೋ ನಡೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರ ಬೆದರಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ರೈತ ಯೂನಿಯನ್ ಗಳೊಂದಿಗೆ ಮಾತುಕತೆ ನಡೆಸಲು ಸರ್ಕಾರ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಮೂರು ಕೃಷಿ ಕಾನೂನುಗಳ ರದ್ದತಿ ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಶಾಸನಾತ್ಮಕ ಖಾತ್ರಿ ಗೆ ಒತ್ತಾಯಿಸಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಹಸ್ರಾರು ರೈತರು ದೆಹಲಿಯಲ್ಲಿ ಗಡಿಯಲ್ಲಿ ಸುಮಾರು ಮೂರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಜನವರಿ 22 ರಂದು ನಡೆದ ಮಾತುಕತೆ ಸಂದರ್ಭದಲ್ಲಿ ಪರಿಹಾರಕ್ಕೆ ಜಂಟಿ ಸಮಿತಿಯೊಂದನ್ನು ರಚಿಸಲಾಗುವುದು ಮತ್ತು ಮೂರು ವಿವಾದಾತ್ಮಕ ಕಾನೂನುಗಳನ್ನು ಒಂದೂವರೆ ವರ್ಷಗಳ ಕಾಲ ಸ್ಥಗಿತಗೊಳಿಸಲಾಗುವುದು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ರೈತ ಯೂನಿಯನ್ ಗಳು ತಿರಸ್ಕರಿಸಿದ್ದವು.