ಗೋಡ್ಸೆ ಬೆಂಬಲಿಗ ಕಾಂಗ್ರೆಸ್ ಗೆ ಸೇರ್ಪಡೆ!

ಸಾಲು ಸಾಲಾಗಿ ಚುನಾವಣೆಗಳನ್ನು ಸೋಲುತ್ತಿರುವ ಕಾಂಗ್ರೆಸ್ ಗೆ ಹತಾಶೆ ಕಾಡುತ್ತಿದೆಯೇ? ಎಂಬ ಪ್ರಶ್ನೆ ಇತ್ತೀಚಿನ ಬೆಳವಣಿಗೆಯಿಂದ ಉದ್ಭವಿಸಿದೆ. 

Published: 25th February 2021 12:29 PM  |   Last Updated: 25th February 2021 12:29 PM   |  A+A-


Desperate times? Madhya Pradesh Congress inducts 'Godse supporter' Babulal Chaurasia into party

ಗೋಡ್ಸೆ ಬೆಂಬಲಿಗ ಕಾಂಗ್ರೆಸ್ ಗೆ ಸೇರ್ಪಡೆ!

Posted By : Srinivas Rao BV
Source : The New Indian Express

ಭೋಪಾಲ್: ಸಾಲು ಸಾಲಾಗಿ ಚುನಾವಣೆಗಳನ್ನು ಸೋಲುತ್ತಿರುವ ಕಾಂಗ್ರೆಸ್ ಗೆ ಹತಾಶೆ ಕಾಡುತ್ತಿದೆಯೇ? ಎಂಬ ಪ್ರಶ್ನೆ ಇತ್ತೀಚಿನ ಬೆಳವಣಿಗೆಯಿಂದ ಉದ್ಭವಿಸಿದೆ. 

ಈ ವರೆಗೂ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಗೋಡ್ಸೆ ಬೆಂಬಲಿಗನನ್ನೇ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಗೋಡ್ಸೆ, ಆತನ ವಿಚಾರಧಾರೆಯ ಬೆಂಬಲಿಗನಾಗಿರುವ ಹಿಂದೂ ಮಹಾಸಭಾದ ಮಾಜಿ ಕಾರ್ಪೊರೇಟರ್ ಬಾಬುಲಾಲ್ ಚೌರಾಸಿಯಾ ಅವರನ್ನು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಸ್ವತಃ ಪಕ್ಷಕ್ಕೆ ಸ್ವಾಗತಿಸಿದ್ದಾರೆ. 

ಕಾಂಗ್ರೆಸ್ ಪಕ್ಷಕ್ಕೆ ಈಗ ಸೇರ್ಪಡೆಯಾಗಿರುವ ಬಾಬು ಲಾಲ್ ಚೌರಾಸಿಯಾ, ಮಹಾತ್ಮಾ ಗಾಂಧಿಯ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯ ಕೋರ್ಟ್ ನಲ್ಲಿ ನೀಡಿದ್ದ ಕೊನೆಯ ಹೇಳಿಕೆಯನ್ನು 1 ಲಕ್ಷ ಮಂದಿಗೆ ತಲುಪಿಸುವುದಾಗಿ 15 ತಿಂಗಳುಗಳ ಹಿಂದೆ ಹೇಳಿದ್ದರು.  ಈ ವ್ಯಕ್ತಿಯನ್ನು ಈಗ ಕಮಲ್ ನಾಥ್ ಹಾಗೂ ಅವರ ಪಕ್ಷದ ಗ್ವಾಲಿಯರ್ ದಕ್ಷಿಣ ಕ್ಷೇತ್ರದ ಶಾಸಕ ಪ್ರವೀಣ್ ಪಾಠಕ್ ಭೋಪಾಲ್ ನಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್ ಗೆ ಅಧಿಕೃತವಾಗಿ ಸ್ವಾಗತಿಸಿದ್ದು ಕಾಂಗ್ರೆಸ್ ಐಟಿ ಸೆಲ್ ಸಹ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.  

ಇತ್ತೀಚೆಗಷ್ಟೇ ಹಿಂದೂ ಮಹಾಸಭಾದ  ಕಚೇರಿಯಲ್ಲಿ ಗ್ರಂಥಾಲಯವೊಂದನ್ನು ಗೋಡ್ಸೆಗೆ ಸಮರ್ಪಿಸಿದ ಹಿನ್ನೆಲೆಯಲ್ಲಿ  ಮಾಜಿ ಸಿಎಂ ಕಮಲ್ ನಾಥ್ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು. ಆದರೆ ಈಗ ಕಾಂಗ್ರೆಸ್ ಗೋಡ್ಸೆ ಬೆಂಬಲಿಗನನ್ನೇ ಪಕ್ಷಕ್ಕೆ ಸೇರಿಸಿಕೊಂಡಿದ್ದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. 

ಈ ಬೆಳವಣಿಗೆಯನ್ನು ಖಚಿತಪಡಿಸಿ ಮಾತನಾಡಿರುವ ಬಾಬುಲಾಲ್ ಚೌರಾಸಿಯಾ ಈ ಹಿಂದೆಯೂ ನಾನು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದೆ, ಇದು ಮರಳಿ ಮನೆಗೆ ಬಂದಂತಾಗಿದೆ ಎಂದು ಹೇಳಿದ್ದಾರೆ. 

"ಗೋಡ್ಸೆಯನ್ನು ವೈಭವೀಕರಿಸುವ ಕಾರ್ಯಕ್ರಮಗಳಲ್ಲಿ ಇತ್ತೀಚಿನ ವರೆಗೂ ಸಕ್ರಿಯವಾಗಿ ಪಾಲ್ಗೊಂಡಿದ್ದಿರಲ್ಲಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಬಾಬು ಲಾಲ್ ಚೌರಾಸಿಯಾ, ಆಗ ನನಗೆ ಅವೆಲ್ಲಾ ಗೊತ್ತಿರಲಿಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ನನ್ನನ್ನು ಮುಂದೆ ತಳ್ಳಲಾಗುತ್ತಿತ್ತು. 2 ವರ್ಷಗಳಿಂದ ಬಲಪಂಥೀಯ ಸಂಘಟನೆಗಳೊಂದಿಗೆ ಸಂಪರ್ಕ ಕಡಿದುಕೊಂಡಿದ್ದೇನೆ" ಎಂದು ಚೌರಾಸಿಯಾ ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ  

ಆದರೆ ಬಾಬುಲಾಲ್ ಚೌರಾಸಿಯಾ ಅವರ ಹೇಳಿಕೆ ಅವರ ನಡೆಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದ್ದು 2016 ರಲ್ಲಿ ಹುತಾತ್ಮ ನಾಥುರಾಮ್ ಗೋಡ್ಸೆ ದೇವಾಲಯದ ಕಾರ್ಯಕ್ರಮ, ಗೋಡ್ಸೆಯನ್ನು ಗಲ್ಲಿಗೇರಿಸಿದ 70 ನೇ ವರ್ಷದ ಸ್ಮರಣೆ ಅಂಗವಾಗಿ 2019 ರಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಈತ ಸಕ್ರಿಯವಾಗಿದ್ದ ದಾಖಲೆಗಳಿವೆ.

2017 ರಲ್ಲಿ ಗ್ವಾಲಿಯರ್ ನ ಹಿಂದೂ ಮಹಾಸಭಾದಲ್ಲಿ ನಡೆದ ಗೋಡ್ಸೆ ಪ್ರತಿಮೆ ಬಳಿಯ ವಿಶೇಷ ಪ್ರಾರ್ಥನೆಯ ಸಂದರ್ಭದಲ್ಲೂ ಬಾಬುಲಾಲ್ ಚೌರಾಸಿಯಾ ಭಾಗಿಯಾಗಿದ್ದರು.
 
ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಶಕ್ತಿ ಕುಗ್ಗಿದೆ, ಇದೇ ಪ್ರದೇಶದಲ್ಲಿ ಇನ್ನು 3 ತಿಂಗಳಲ್ಲಿ ಪುರಸಭೆ ಚುನಾವಣೆಯೂ ಎದುರಾಗಲಿದ್ದು, ಕಾಂಗ್ರೆಸ್ ಗೆ ಕಾರ್ಯಕರ್ತರ ಆಧಾರವಿಲ್ಲದೇ ಯಾರನ್ನು ಬೇಕಾದರೂ ಸೇರಿಸಿಕೊಳ್ಳಲು ಹವಣಿಸುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗತೊಡವಿದೆ. 

"ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗಾಂಧಿ ಜೊತೆಗಿದ್ದಾರೋ ಅಥವ ಗೋಡ್ಸೆ ತತ್ವಗಳೊಂದಿಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಇತ್ತೀಚೆಗೆ ಕಮಲ್ ನಾಥ್ ಸವಾಲು ಹಕಿದ್ದರು.  ಆದರೆ ಈಗ ಅದೇ ಪ್ರಶ್ನೆಗೆ ಉತ್ತರಿಸುವ ಪರಿಸ್ಥಿತಿಯಲ್ಲಿ ಕಮಲ್ ನಾಥ್ ಇದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಜನೀಶ್ ಅಗರ್ವಾಲ್ ಕಾಂಗ್ರೆಸ್ ಪಕ್ಷದ ನಡೆಯನ್ನು ಟೀಕಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಎಂಪಿಸಿಸಿ ಪ್ರಧಾನ ಕಾರ್ಯದರ್ಶಿ ಅವರನ್ನು ಸಂಪರ್ಕಿಸಲು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಯತ್ನಿಸಿತಾದರೂ ಅವರು ಪ್ರತಿಕ್ರಿಯೆ ನೀಡುವುದಕ್ಕೆ ನಿರಾಕರಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp